ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ವಿಧವೆಯರಿಗೆ ನೀಡುವ ಹಣ ಕೂಡಿಸುವುದಾಗಿ ನಂಬಿಸಿ ವೃದ್ಧೆಯನ್ನು ಕರೆದುಕೊಂಡ ಹೋದ ವಂಚಕನೋರ್ವ, ಆಕೆಯ ಕೊರಳಿನಲ್ಲಿದ್ದ ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ದೊಡ್ಡಬಳ್ಳಾಪುರದ ವಿವೇಕಾನಂದ ನಗರದಲ್ಲಿ ನಡೆದಿದೆ. ವೃದ್ಧೆ ಸುಬ್ಬಲಕ್ಷಮ್ಮ ವಂಚಕನ ಮೋಸದ ಬಲೆಗೆ ಸಿಲುಕಿ 20 ಗ್ರಾಂ ತೂಕದ ಚಿನ್ನದ ಸರವನ್ನು ಕಳೆದುಕೊಂಡಿದ್ದಾರೆ.
ಸುಬ್ಬಲಕ್ಷಮ್ಮ ವರ್ಷದ ಹಿಂದೆ ಗಂಡನನ್ನ ಕಳೆದುಕೊಂಡು ವಿವೇಕಾನಂದ ನಗರದಲ್ಲಿ ಒಂಟಿಯಾಗಿ ವಾಸವಾಗಿದ್ದರು. ಮೇ 11 ಮಧ್ಯಾಹ್ನ 1 ಗಂಟೆಯ ಸಮಯದಲ್ಲಿ ವೃದ್ಧೆ ಸಮೀಪದ ಆಂಜನೇಯ ದೇವಸ್ಥಾನದಲ್ಲಿ ಕುಳಿತಿದ್ದರು. ಮೋಟಾರ್ ಬೈಕ್ನಲ್ಲಿ ಸುಮಾರು 35 ವರ್ಷದ ವ್ಯಕ್ತಿಯೋರ್ವ ವೃದ್ಧೆಯ ಬಳಿ ಬಂದಿದ್ದಾನೆ. ಗಂಡ ಸತ್ತವರಿಗೆ, ಕಣ್ಣು ಕಾಣದವರಿಗೆ ತಾಲೂಕು ಕಚೇರಿಯಲ್ಲಿ 10 ಸಾವಿರ ಹಣ ಕೊಡುತ್ತಿದ್ದಾರೆಂದು ಹೇಳಿದ್ದಾನೆ. ವಂಚಕನ ಮಾತಿಗೆ ಮರುಳಾದ ವೃದ್ಧೆ ಆತನನ್ನು ನಂಬಿದ್ದಾರೆ. ನಂತರ ವಂಚಕನು ವೃದ್ಧೆಯನ್ನು ಬೈಕ್ನಲ್ಲಿ ಕರೆದುಕೊಂಡು ಇಸ್ಲಾಂಪುರಕ್ಕೆ ಹೋಗಿದ್ದಾನೆ.
ಚಿನ್ನದ ಒಡವೆ ಧರಿಸಿದ್ದರೆ ಅಧಿಕಾರಿಗಳು ಹಣ ಕೊಡುವುದಿಲ್ಲ ಎಂದು ಹೇಳಿದ ಆತ ವೃದ್ಧೆಯಿಂದ ಚಿನ್ನದ ಸರ ಮತ್ತು ಮೊಬೈಲ್ ಅನ್ನು ಸ್ಕೂಟರ್ನ ಡಿಕ್ಕಿಯಲ್ಲಿ ಹಾಕಿಸಿದ್ದಾನೆ. ಅಲ್ಲಿಂದ ಸೌಂದರ್ಯ ಮಹಲ್ ಬಳಿಯ ಕೃಷ್ಣಪ್ಪ ಕ್ಲಿನಿಕ್ ಬಳಿ ವೃದ್ಧೆಯನ್ನ ಕರೆದುಕೊಂಡ ಹೋಗಿದ್ದಾನೆ. ಅಲ್ಲಿ ವೃದ್ಧೆಯ ಕೈಗೆ 200 ರೂಪಾಯಿ ಕೊಟ್ಟ ವಂಚಕ ಜೆರಾಕ್ಸ್ ಮಾಡಿಸಿಕೊಂಡು ಬರುವುದಾಗಿ ಹೇಳಿ ಅಲ್ಲಿಂದ ಪರಾರಿಯಾಗಿದ್ದಾನೆ. ವಂಚಕ ಬರುವುದನ್ನೇ ಕಾಯುತ್ತಿದ್ದ ವೃದ್ಧೆ ಆತ ಬಾರದೆ ಹೋದಾಗ ಅಲ್ಲಿಂದ ನಡೆದುಕೊಂಡು ಸಂಬಂಧಿಕರೊಬ್ಬರ ಮನೆಗೆ ಬಂದು ನಡೆದ ಮೋಸದ ಬಗ್ಗೆ ಹೇಳಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಜೂಜುಕೋರರ ಹಿಡಿಯಲು ಯತ್ನಿಸಿ ಎರಡನೇ ಮಹಡಿಯಿಂದ ಬಿದ್ದು ಎಸ್ಐ ಸಾವು