ನೆಲಮಂಗಲ: ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಸ್ತೆ ಬದಿಗಳಲ್ಲಿ ನಿರ್ಮಿಸಲಾಗಿರುವ ಒಟ್ಟು 19 ದೇವಸ್ಥಾನಗಳ ತೆರವು ಕಾರ್ಯಾಚರಣೆ ಪ್ರಾರಂಭವಾಗಿದೆ.
ರಸ್ತೆ ಬದಿ ನಿರ್ಮಿಸಲಾಗಿರುವ ದೇವಸ್ಥಾನ, ಚರ್ಚ್ ಮತ್ತು ಮಸೀದಿಗಳನ್ನು ತೆರವುಗೊಳಿಸುಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದ ನೆಲಮಂಗಲ ತಹಶೀಲ್ದಾರ್ ಕೆ. ಮಂಜುನಾಥ್ ನೇತೃತ್ವದ ತಂಡ, ನೆಲಮಂಗಲ ಪಟ್ಟಣದ ಹಳೆಯ ಮಾರುಕಟ್ಟೆ ಚೌಕದ ಬಳಿಯ ತಪಸ್ವಿ ವೀರಾಂಜನೇಯ ಸ್ವಾಮಿ ದೇವಸ್ಥಾನವನ್ನು ಜೆಸಿಬಿ ಬಳಸಿ ತೆರವುಗೊಳಿಸಿತು.
ಮಾರ್ಕೆಟ್ ಚೌಕದ ಬಳಿ ಸುಮಾರು 8 ವರ್ಷಗಳ ಹಿಂದೆ ಕೆಲ ದಾನಿಗಳು ಹಾಗೂ ಸಂಘ ಸಂಸ್ಥೆಗಳ ನೆರವಿನಿಂದ ತಪಸ್ವಿ ವೀರಾಂಜನೇಯ ದೇವಸ್ಥಾನ ನಿರ್ಮಾಣ ಮಾಡಲಾಗಿತ್ತು. ಅಧಿಕಾರಿಗಳು ದೇವಸ್ಥಾನವನ್ನು ತೆರವುಗೊಳಿಸುವ ಸಂದರ್ಭ ಸ್ಥಳೀಯರು ಹಾಗೂ ಭಜರಂಗದಳದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು.
ಓದಿ: ಶಿಕ್ಷಕ ಸಮುದಾಯಕ್ಕೆ ಆದ್ಯತೆ ಮೇರೆಗೆ ಲಸಿಕೆ ನೀಡಿ : ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಈ ವೇಳೆ ಭಜರಂಗದಳದ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆಯಿತು. ಭಜರಂಗದಳದ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿ ದಿಕ್ಕಾರ ಕೂಗಲು ಪ್ರಾರಂಭಿಸಿದರು. ಇನ್ಸ್ಪೆಕ್ಟರ್ ಎ.ವಿ ಕುಮಾರ್ ಹಾಗೂ ಸಿಬ್ಬಂದಿ ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಪ್ರತಿಭಟನಾಕಾರರನ್ನು ಹತೋಟಿಗೆ ತರಲು ಸಾಧ್ಯವಾಗಿಲ್ಲ. ಕೊನೆಗೆ ಇಬ್ಬರನ್ನು ಪೊಲೀಸರು ಠಾಣೆಗೆ ಎಳೆದೊಯ್ದರು.
ಸುಪ್ರೀಂಕೋರ್ಟ್ ಆದೇಶದಂತೆ ನೆಲಮಂಗಲ ತಾಲೂಕಿನ 4 ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಟ್ಟು 19 ರಸ್ತೆ ಬದಿಯ ದೇವಸ್ಥಾನಗಳನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ತಾಲೂಕು ಆಡಳಿತ ಪಟ್ಟಿ ಮಾಡಿದೆ. ಹಂತ ಹಂತವಾಗಿ ಅವುಗಳನ್ನು ತೆರವು ಮಾಡಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.