ಆನೇಕಲ್ : ರಸ್ತೆ ದಾಟುತ್ತಿದ್ದ ವೃದ್ದನಿಗೆ ಸ್ವಿಫ್ಟ್ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ಆನೇಕಲ್‌ನ ಚಂದಾಪುರ ಮುಖ್ಯರಸ್ತೆಯಲ್ಲಿ ನಡೆದಿದೆ.
ಕಾವಲಹೊಸಹಳ್ಳಿ ಗ್ರಾಮದ ನಿವಾಸಿ ಮದನಗಿರಿಯಪ್ಪ ರಸ್ತೆ ದಾಟುತ್ತಿದ್ದ ವೇಳೆ ಚಂದಾಪುರ ಮುಖ್ಯ ರಸ್ತೆಯ ಕಾವಲಹೊಸಹಳ್ಳಿ ಗೇಟ್ ಬಳಿ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ವೃದ್ದ ಗಂಭೀರ ಗಾಯಗೊಂಡಿದ್ದು, ಕೂಡಲೇ ಸ್ಥಳೀಯ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮದನಗಿರಿಯಪ್ಪ ಸಾವನ್ನಪ್ಪಿದ್ದಾರೆ. ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹೆಬ್ಬಗೋಡಿ ಮೂಲದ ಕೃಷ್ಣಪ್ಪ ಹಾಗೂ ಗಾಯಿತ್ರಿ ದಂಪತಿಗೆ ಸೇರಿದ ಕಾರು ಎಂದು ತಿಳಿದು ಬಂದಿದೆ. ಆನೇಕಲ್ನಲ್ಲಿರುವ ಸಂಬಂಧಿಕರ ಮನೆಗೆ ಬರುವಾಗ ಈ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಆನೇಕಲ್ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.