ಬೆಂಗಳೂರು/ಆನೇಕಲ್: ಅತ್ಯಾಚಾರಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಆನೇಕಲ್ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.
ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಮಹಾತ್ಮ ಗಾಂಧಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ವಿದ್ಯಾರ್ಥಿನಿಯರು, ವಕೀಲರು, ಶಿಕ್ಷಕರು, ಎಸ್ಎಫ್ಐ ಕಾರ್ಯಕರ್ತರು ಹಾಗೂ ಮಹಿಳಾ ಸಂಘಟಕರು, ಅತ್ಯಾಚಾರಿಗಳನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಬಾರದು. ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ತಮಿಳುನಾಡಿನ ರೋಜಾ, ತೆಲಂಗಾಣದ ಪ್ರಿಯಾಂಕಾ ರೆಡ್ಡಿ ಸೇರಿದಂತೆ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ದೇಶವೇ ತತ್ತರಿಸಿ ಹೋಗಿದೆ. ವ್ಯವಸ್ಥೆಯೇ ಸಂವಿಧಾನದ ಆಶಯಗಳ ಮೇಲೆ ಅತ್ಯಾಚಾರವೆಸಗಿದಂತೆ ಭಾಸವಾಗುತ್ತಿದೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಭಾರತ ಅಂದ್ರೆ ಹೆಣ್ಣನ್ನು ಪೂಜ್ಯನೀಯ ಸ್ಥಾನದಲ್ಲಿಟ್ಟು ನೋಡುವ ಸಂಸ್ಕಾರಯುತ ದೇಶ. ಅತ್ಯಾಚಾರಗಳಿಂದ ಭಾರತದ ಬಗ್ಗೆ ಇರುವ ಜಾಗತಿಕ ದೃಷ್ಟಿಕೋನವೇ ಬದಲಾಗಿದೆ. ಪ್ರಜ್ಞಾವಂತ ಸಮಾಜಕ್ಕೆ ಕಳಂಕ ತಂದಿರುವ ಈ ದುರ್ಘಟನೆಗಳು ಮರುಕಳಿಸಬಾರದು. ಆದ್ದರಿಂದ ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.