ಆನೇಕಲ್ : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆ ಕಣ ರಂಗೇರುತ್ತಿದೆ. ಅಭ್ಯರ್ಥಿಗಳ ಮಧ್ಯೆ ಪರಸ್ಪರ ಕೆಸರೆರಚಾಟ ಜೋರಾಗಿದೆ.
ಆನೇಕಲ್ ತಾಲೂಕಲ್ಲಿ ಚುನಾವಣಾ ಪೂರ್ವಬಾವಿ ಸಿದ್ದತೆಗಳು ಹಲವಾರು ವಿವಾದಗಳಿಂದ ಕೂಡಿದ್ದು ಚುನಾವಣಾ ಕೇಂದ್ರದ ಜಾಗಕ್ಕಾಗಿ ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಕೊನೆಗೆ ಹೈಕೋರ್ಟ್ ಚುನಾವಣಾಧಿಕಾರಿಗಳ ಪರ ಆದೇಶ ಹೊರಡಿಸಿ ಖಾಸಗೀ ಶಾಲೆಯನ್ನು ಚುನಾವಣೆ ಮುಗಿಯುವವರೆಗೂ ಬೇಷರತ್ತಾಗಿ ನೀಡಲೇಬೇಕೆಂದು ಹುಕುಂ ಹೊರಡಿಸಿದೆ. ಸಧ್ಯಕ್ಕೆ ಇದ್ದ ಎಲ್ಲ ವಿಘ್ನಗಳು ಶಮನವಾದಂತಾಗಿದೆ. ಹೀಗಾಗಿ ತಾಲೂಕಿನಾದ್ಯಂತ ಎಲ್ಲ ಸಿದ್ಧತೆಗಳು ಅಚ್ಚುಕಟ್ಟಾಗಿ ಸಾಗಿವೆ.
ಆನೇಕಲ್ ತಾಲೂಕಲ್ಲಿ ಒಟ್ಟು 3,56,632 ಮತದಾರರಿದ್ದಾರೆ. ಪುರುಷ ಮತದಾರರು 1,92,459, ಮಹಿಳೆಯರು 1,71336 ಆಗಿದ್ದು ಇತರರು 86 ಮಂದಿಯೆಂದು ತಿಳಿದುಬಂದಿದೆ. ಒಟ್ಟು 368 ಮತಗಟ್ಟೆಗಳಲ್ಲಿ ಮತದಾತನ ನಡೆಯಲಿದೆ. 69 ಸೂಕ್ಷ್ಮ ಮತಗಟ್ಟೆಗಳಾಗಿದ್ದು, 4 ಅತಿಸೂಕ್ಷ್ಮ ಮತಗಟ್ಟೆಗಳಾಗಿವೆ. 2 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಆನೇಕಲ್ ವಿಭಾಗದ ಸಹಾಯಕ ಚುನಾವಣಾಧಿಕಾರಿ ಮದನ್ ಮೋಹನ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಎ.18ರಂದು ನಡೆಯಲಿದ್ದು, ಅಂದು ಬೆಳಗ್ಗೆ 7 ರಿಂದ ಸಂಜೆ 6ರವರೆಗೂ ಜನ ಹಕ್ಕು ಚಲಾಯಿಸಬಹುದು. ಇದಕ್ಕಾಗಿ ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ ಎಂದು ಮದನ್ ಮೋಹನ್ ಮಾಹಿತಿ ನೀಡಿದರು.
ಇನ್ನು ಚಂದಾಪುರ ಕಂದಾಯ ಅಧಿಕಾರಿ ಮಂಜುನಾಥ್ ಅವರನ್ನು ಅಮಾನತುಗೊಳಿಸಲಾಗಿದ್ದು, ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದು ಸಾಬೀತಾದ ಹಿನ್ನಲೆ ಜಿಲ್ಲಾಧಿಕಾರಿ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಚುನಾವಣೆಗೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ಎಚ್ಚರಿಕೆ ಗಂಟೆ ರವಾನೆಯಾಗಿದೆ ಎಂದರು.