ದೊಡ್ಡಬಳ್ಳಾಪುರ: ದಿನಸಿ ಸಾಮಗ್ರಿಗಳ ಕಿಟ್ ವಿತರಣೆ ವೇಳೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಮಾತ್ರ ಕಿಟ್ ವಿತರಿಸುವ ಮೂಲಕ ಶಾಸಕ ಟಿ.ವೆಂಕಟರಮಣಯ್ಯ ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ, ಜೆಡಿಎಸ್ ಮುಖಂಡರು ಆರೋಪಿಸಿದ್ದಾರೆ.
ತಾಲೂಕಿನ ಸಾಸಲು ಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿ ಕಿಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಸಕರು ಕೇವಲ 250 ಕಿಟ್ಗಳ ವ್ಯವಸ್ಥೆ ಮಾಡಿದ್ದರು. ಆದರೆ ಕಿಟ್ ಪಡೆದುಕೊಳ್ಳಲು 500ಕ್ಕೂ ಹೆಚ್ಚಿನ ಜನ ಬಂದಿದ್ದರು. ಈ ವೇಳೆ ಶಾಸಕರು ತಮ್ಮ ಪಕ್ಷದ ಕಾರ್ಯಕರ್ತರನ್ನು ಮಾತ್ರ ಗುರುತಿಸಿ ಟೋಕನ್ ನೀಡಿ ಕಿಟ್ ವಿತರಿಸುತ್ತಿದ್ದಾರೆ ಎಂದು ಜೆಡಿಎಸ್, ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಸಲು ಹೋಬಳಿಯಿಂದ ಅವರ ಪರವಾಗಿ ಕಡಿಮೆ ಮತ ಬಿದ್ದಿದವು. ಹೀಗಾಗಿ ಶಾಸಕರು ತಮಗೆ ಮತ ಹಾಕಿದವರನ್ನು ಮಾತ್ರ ಗುರುತಿಸಿ ಕಿಟ್ ವಿತರಿಸುತ್ತಿದ್ದಾರೆ ಎಂದಿದ್ದಾರೆ.
ಕಿಟ್ ವಿತರಣೆ ವಿಚಾರದಲ್ಲಿ ಶಾಸಕರ ಬೆಂಬಲಿಗರು ಮತ್ತು ಇತರ ಪಕ್ಷಗಳ ಮುಖಂಡರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಶಾಸಕರು ತಮ್ಮ ಬೆಂಬಲಿಗರಿಗೆ ಮಾತ್ರ ಕಿಟ್ ವಿತರಿಸುತ್ತಿದ್ದಾರೆ ಎಂದು ಆರೋಪಿಸಿದ ಜನರು, ಕಿಟ್ ವಿತರಣಾ ಸ್ಥಳಕ್ಕೆ ಆಗಮಿಸಿ ತಾವಾಗಿಯೇ ಕಿಟ್ಗಳನ್ನು ಕೊಂಡೊಯ್ದರು. ಈ ವೇಳೆ ನೂಕುನುಗ್ಗಲು ಉಂಟಾಗಿ, ಸಾಮಾಜಿಕ ಅಂತರವನ್ನು ಗಾಳಿಗೆ ತೂರಲಾಯಿತು.