ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ) : ಅಣ್ಣನ ಪತ್ನಿ (ಅತ್ತಿಗೆ) ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ತಮ್ಮನೋರ್ವ ತನ್ನ ಸಹೋದರನನ್ನೇ ಕೊಲೆ ಮಾಡಿರುವ ಘಟನೆ ತಾಲೂಕಿನ ದೊಡ್ಡಮಂಕಲಾಳ ಗ್ರಾಮದಲ್ಲಿ ನಡೆದಿದೆ. ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಅಣ್ಣ- ತಮ್ಮನ ನಡುವಿನ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ. ಅಣ್ಣನನ್ನು ಕೊಂದ ತಮ್ಮ ಬಳಿಕ ಅತ್ತಿಗೆಯ ಜೊತೆ ಪರಾರಿಯಾಗಿದ್ದಾನೆ.
ದೊಡ್ಡಮಂಕಲಾಳ ಗ್ರಾಮದ ನಿವಾಸಿ ಗಂಗರಾಜು (35) ಕೊಲೆಯಾಗಿದ್ದು, ಒಡಹುಟ್ಟಿದ ತಮ್ಮ ರವಿ ಎಂಬಾತನೆ ಅಣ್ಣನನ್ನು ಕೊಂದು ಪರಾರಿಯಾದ ಆರೋಪಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಗಂಗರಾಜು ತನ್ನ ಸಂಬಂಧಿಯೊಬ್ಬರ ಮಗಳನ್ನೇ ಮದುವೆಯಾಗಿದ್ದ, ಇವರಿಗೆ ಮೂವರು ಮಕ್ಕಳು ಇದ್ದಾರೆ. ಆದರೆ ತಮ್ಮ ರವಿ ಅತ್ತಿಗೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಅಲ್ಲದೆ, ಕೆಲ ವರ್ಷಗಳ ಹಿಂದೆ ಅತ್ತಿಗೆ- ಮೈದುನ ಇಬ್ಬರೂ ಮನೆ ಬಿಟ್ಟು ಓಡಿ ಹೋಗಿದ್ದರು. ಇದರಿಂದ ಬೇಸತ್ತ ಗಂಗರಾಜು ತನ್ನ ಮಕ್ಕಳನ್ನು ಅನಾಥಾಶ್ರಮದಲ್ಲಿ ಬಿಟ್ಟು ಒಬ್ಬನೇ ಗುಡಿಸಲಿನಲ್ಲಿ ವಾಸವಾಗಿದ್ದ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಆದರೆ, ಓಡಿ ಹೋಗಿದ್ದ ಗಂಗರಾಜು ಹೆಂಡತಿ ಹಾಗೂ ಸಹೋದರ ರವಿ ಕಳೆದ 15 ದಿನಗಳ ಹಿಂದೆ ವಾಪಸ್ ಬಂದಿದ್ದರು. ಇದಾದ ಬಳಿಕ ಸಹೋದರರ ನಡುವೆ ಜಗಳ ನಡೆದು, ಇಬ್ಬರೂ ಹೊಡೆದಾಡಿಕೊಂಡಿದ್ದರು. ಇದೇ ಕೋಪದಲ್ಲಿ ಸೋಮವಾರ ರಾತ್ರಿ ಮನೆಗೆ ಬಂದ ರವಿ, ಅಣ್ಣನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಬಳಿಕ ಅತ್ತಿಗೆಯ ಜೊತೆಗೆ ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಆರೋಪಿಯ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ: ಕೋಲಾರ: ಸ್ಥಳೀಯ ಪ್ರಭಾವಿ ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ; ಮೂರೇ ದಿನದಲ್ಲಿ ಇಬ್ಬರು ಕೊಲೆ
ಪ್ರತ್ಯೇಕ ಪ್ರಕರಣ: ಅಣ್ಣ ತಂಗಿಯ ಸಂಬಂಧವನ್ನು ತಪ್ಪಾಗಿ ತಿಳಿದ ಪತಿಯೊಬ್ಬ ಇಬ್ಬರನ್ನೂ ಕೊಲೆ ಮಾಡಿದ್ದ ಘಟನೆ ಇತ್ತೀಚೆಗೆ ವಿಜಯನಗರ ಜಿಲ್ಲೆಯಲ್ಲಿ ನಡೆದಿತ್ತು. ಕೊಲೆಗೆ ಆರೋಪಿಯ ತಂದೆಯೂ ಕೂಡ ಜೊತೆಯಾಗಿದ್ದ. ಅಲ್ಲದೆ, ಕೊಲೆ ಬಳಿಕ ಅಣ್ಣ ತಂಗಿಯರಿಬ್ಬರೂ ವಿಷ ಸೇವಿಸಿ ಮೃತರಾಗಿದ್ದಾರೆ ಎಂದು ಆರೋಪಿಗಳು ಕಥೆ ಹೆಣೆದಿದ್ದರು. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ಈ ಪ್ರಕರಣ ನಡೆದಿತ್ತು. ಅಣ್ಣ- ತಂಗಿಯರಾದ ಕಾವ್ಯ (30) ಮತ್ತು ಕೊಟ್ರೇಶ್ (35) ಮೃತದೇಹಗಳನ್ನು ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಚಿಗಟೇರಿ ಠಾಣೆ ಪೊಲೀಸರು ಆರೋಪಿಗಳಾದ ಬಸವರಾಜ್ ನಂದೀಶ್ ಹಾಗೂ ತಂದೆ ಜಾತಪ್ಪ ಎಂಬುವರನ್ನು ಬಂಧಿಸಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.