ಹೊಸಕೋಟೆ(ಬೆಂಗಳೂರು ಗ್ರಾಮಾಂತರ): ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವಿವಾಹಿತ ವ್ಯಕ್ತಿಯೊಬ್ಬ ಎರಡು ದಿನಗಳಿಂದ ಪ್ರೇಯಸಿ ಸರಿಯಾಗಿ ಮಾತನಾಡದ್ದಕ್ಕೆ ಮನನೊಂದು ಆಕೆಯ ಮನೆಯ ಮೇಲ್ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಹೊಸಕೋಟೆಯಲ್ಲಿ ನಡೆದಿದೆ.
ಹೊಸಕೋಟೆ ತಾಲೂಕಿನ ಸಮೇತನಹಳ್ಳಿಯ ರಾಜು (40) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಕಳೆದ ಎರಡು ವರ್ಷದಿಂದ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದು, ಆಕೆಯೂ ಕೂಡ ತನ್ನ ಗಂಡನನ್ನು ತೊರೆದು ರಾಜು ಜೊತೆ ಇದ್ದಳು ಎನ್ನಲಾಗಿದೆ.
ಆದರೆ, ಇತ್ತೀಚೆಗೆ ಮಹಿಳೆ ಹಾಗೂ ಮೃತ ರಾಜು ನಡುವೆ ಕೆಲ ವಿಚಾರಕ್ಕೆ ಮನಸ್ತಾಪ ಉಂಟಾಗಿತ್ತು. ಕಳೆದ ಎರಡ್ಮೂರು ದಿನಗಳಿಂದ ಪರಸ್ಪರ ಮಾತನಾಡಿರಲಿಲ್ಲ. ಕರೆ ಮಾಡಿದರೂ ಸಹ ಮಹಿಳೆ ಸ್ವೀಕರಿಸಿರಲಿಲ್ಲ. ಅಲ್ಲದೇ, ಮನೆ ಬಾಗಿಲು ಕೂಡ ತೆಗೆಯದೇ ಸತಾಯಿಸಿದ್ದಳು. ಇದರಿಂದ ನೊಂದ ರಾಜು ಮಹಿಳೆಯ ಮನೆ ಎದುರುಗಡೆ ಮೇಲ್ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ರಮ ಸಂಬಂಧ ವಿಚಾರವಾಗಿ ಈ ಹಿಂದೆಯೇ ರಾಜು ಮತ್ತು ಮಹಿಳೆ ವಿರುದ್ಧ ಆತನ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆಗ ಪೊಲೀಸರು ಬುದ್ಧಿಮಾತು ಹೇಳಿ ಕಳಿಸಿದ್ದರು ಎನ್ನಲಾಗಿದೆ. ಇದೀಗ ಆತ್ಮಹತ್ಯೆ ಬಗ್ಗೆ ರಾಜು ಮನೆಯವರು ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅಂಬೆಗಾಲಿಡುವ ಮಗುವಿನ ಮೇಲೆ ಅತ್ಯಾಚಾರ; ಆರೋಪಿಯ ಬಂಧನ