ದೇವನಹಳ್ಳಿ: ಮಾರಕವಾದ ವೈರಾಣು ಕೋವಿಡ್-19 ನೊಂದಿಗೆ ಜೀವನ ಸರಿದೂಗಿಸಿಕೊಂಡು ಮತ್ತೆ ಬದುಕನ್ನು ಕಟ್ಟಿಕೊಳ್ಳುವ ಅನಿವಾರ್ಯತೆ ಎದುರಾಗಿರುವ ಪರಿಸ್ಥಿತಿಯಲ್ಲಿ, ಜನರು ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳುವ ಮೂಲಕ ವೈರಾಣು ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಅಶೋಕ ತಿಳಿಸಿದರು.
ದೇವನಹಳ್ಳಿ ತಾಲೂಕು ಪಂಚಾಯತಿ ಕಚೇರಿ ಸಭಾಂಗಣದಲ್ಲಿಂದು ಕೋವಿಡ್-19 ವೈರಸ್ ನಿಯಂತ್ರಣ ಹಾಗೂ ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಕೋವಿಡ್-19 ವೈರಾಣು ಹರಡುವಿಕೆ ಹಾಗೂ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ ದೇಶ ಹಾಗೂ ರಾಜ್ಯಕ್ಕೆ ಆರ್ಥಿಕವಾಗಿ ಸಾಕಷ್ಟು ಸಮಸ್ಯೆ ಎದುರಾಗಿದೆ. ಹೀಗೆ ಪರಿಸ್ಥಿತಿ ಮುಂದುವರಿದರೆ, ಜನರಿಗೆ ಬದುಕು ಕಟ್ಟಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಅರಿತು ಸರ್ಕಾರ ಭಾನುವಾರ ಸಂಪೂರ್ಣ ಲಾಕ್ ಡೌನ್ ಹಾಗೂ ಕರ್ಫ್ಯೂ ಸಮಯ ಮುಂದುವರಿಕೆ ಹೊರತುಪಡಿಸಿ ಎಲ್ಲವನ್ನು ಸಡಿಲಿಸಿದೆ ಎಂದು ಹೇಳಿದರು.
ಬಹಳಷ್ಟು ಖಾಸಗಿ ಕ್ಲಿನಿಕ್ ಹಾಗೂ ಆಸ್ಪತ್ರೆಗಳು ಮುಚ್ಚುವ ಮೂಲಕ ಆರೋಗ್ಯ ಸೇವೆಯನ್ನು ಸ್ಥಗಿತಗೊಳಿಸಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಎಲ್ಲಾ ಖಾಸಗಿ ವೈದ್ಯರು ತಕ್ಷಣದಿಂದಲೇ ತಮ್ಮ ಸೇವೆಯನ್ನು ಮತ್ತೆ ಆರಂಭಿಸಬೇಕು. ಯಾವುದೇ ವೈದ್ಯಕೀಯ ತುರ್ತು ಅಥವಾ ಅಪಘಾತಗೊಳಗಾದ ವ್ಯಕ್ತಿಗಳು ಆರೋಗ್ಯ ಸೇವೆಗೆ ಬಂದಾಗ ಕೋವಿಡ್-19 ತಪಾಸಣೆಗೆ ಶಿಫಾರಸ್ಸು ಮಾಡದೆ, ಅಗತ್ಯ ಸೇವೆಯನ್ನು ನೀಡಬೇಕು ಎಂದು ತಿಳಿಸಿದರು.