ಬೆಂಗಳೂರು: ವಿಮಾನ ನಗರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ತಾಲೂಕು ಕಚೇರಿಗೆ ರಿಜಿಸ್ಟರ್ ಮಾಡಿಸಿಕೊಳ್ಳಲು, ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು, ಪಹಣಿ, ಸರ್ವೆ ಸೇರಿದಂತೆ ಹಲವಾರು ಅಧಿಕಾರಿಗಳ ಕಚೇರಿ ಇದ್ದು, ಪ್ರತಿ ದಿನ ಸಾವಿರಾರು ಜನರು ತಮ್ಮ ಕೆಲಸ ಕಾರ್ಯಗಳಿಗೆ ಇಲ್ಲಿಗೆ ಬರುತ್ತಾರೆ. ದ್ವಿಚಕ್ರ ವಾಹನ ,ಕಾರುಗಳಲ್ಲಿ ಸಾಕಷ್ಟು ಜನ ಬರುತ್ತಾರೆ. ಆದರೆ ಈ ವಾಹನಗಳ ನಿಲುಗಡೆಗೆ ಶುಲ್ಕ ವಸೂಲಿ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಹೊಸಕೋಟೆ, ದೊಡ್ಡಬಳ್ಳಾಪುರ, ನೆಲಮಂಗಲ ತಾಲೂಕು ಕಚೇರಿಗಳಲ್ಲಿ ಇಲ್ಲದ ಪಾರ್ಕಿಂಗ್ ಫೀಸ್ ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಪಡೆದುಕೊಳ್ಳುತ್ತಿದ್ದಾರೆ. ಮೊದಲು ದೇವನಹಳ್ಳಿ ತಾಲೂಕು ಆಫೀಸ್ನಲ್ಲಿ ಯಾವುದೇ ಪಾರ್ಕಿಂಗ್ ಶುಲ್ಕ ಇರಲಿಲ್ಲ. ಕಳೆದ ಎರಡು ತಿಂಗಳಿಂದ ಈ ಹೊಸ ರೂಲ್ಸ್ ಬಂದಿದೆ. ಇದಲ್ಲದೇ ವಿಕಲಚೇತನರು, ವಯಸ್ಸಾದವರು ಬರುವ ಈ ಕಚೇರಿಯ ಗೇಟ್ ಓಪನ್ ಮಾಡುವುದೇ ಇಲ್ಲ. ತಮಗೆ ಬೇಕಾದವರಿಗೆ ಮಾತ್ರ ಗೇಟ್ ತೆರೆಯುವ ಈ ಕಚೇರಿಯಲ್ಲಿ ಸಾರ್ವಜನಿಕರ ವಾಹನಗಳಿಗೆ ನೋ ಎಂಟ್ರಿ. ಕಚೇರಿಯ ಸುತ್ತಮುತ್ತ ಸಾಕಷ್ಟು ಜಾಗವಿದ್ದು, ಪಾರ್ಕಿಂಗ್ ಮಾಡುವುದಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಒಳಗಡೆ ಸಾರ್ವಜನಿಕರ ವಾಹನಗಳನ್ನು ಮಾತ್ರ ಬಿಡದೇ ಕಚೇರಿಯಲ್ಲಿ ಕೆಲಸ ಮಾಡುವ ಮತ್ತು ಕೆಲವು ಪ್ರಭಾವಿ ವ್ಯಕ್ತಿಗಳ ವಾಹನಗಳನ್ನು ಮಾತ್ರ ಒಳಗಡೆ ಬಿಡುತ್ತಿದ್ದಾರೆ. ಇದರಿಂದ ಒಬ್ಬರಿಗೆ ಸುಣ್ಣ ಇನ್ನೊಬ್ಬರಿಗೆ ಬೆಣ್ಣೆ ರೀತಿ ತಾಲೂಕು ಕಚೇರಿಯ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈ ರೀತಿಯ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ತಾಲೂಕು ಕಚೇರಿಯಲ್ಲಿ ಹೊಸದಾಗಿ ಏನೇನೋ ರೂಲ್ಸ್ಗಳನ್ನು ಜಾರಿಗೆ ತರ್ತಾ ಇದ್ದಾರೆ. ಇದುವರೆಗೂ ನಮ್ಮ ವಾಹನಗಳ ನಿಲುಗಡೆಗೆ ಒಳ ಪ್ರವೇಶ ನೀಡುತ್ತಿದ್ದ ಅಧಿಕಾರಿಗಳು, ಇದೀಗ ಒಳ ಬಿಡದೇ ಹೊರಗಡೆ ಪಾರ್ಕಿಂಗ್ ಶುಲ್ಕ ಕೊಟ್ಟು ಬನ್ನಿ ಅಂತ ಹೇಳ್ತಾ ಇದ್ದಾರೆ. ಅರ್ಧ ಗಂಟೆ ಕೆಲಸ ಇರಲಿ, ಹತ್ತು ನಿಮಿಷದ ಕೆಲಸ ಇದ್ದರೂ ದ್ವಿಚಕ್ರ ವಾಹನಕ್ಕೆ 10 ರೂ. ಪಾರ್ಕಿಂಗ್ ಶುಲ್ಕ ನೀಡಬೇಕು. ಇದರಿಂದ ಜನರಿಗೆ ತುಂಬಾ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಈ ಬಗ್ಗೆ ತಾಲೂಕಿನ ದಂಡಾಧಿಕಾರಿ ಕೇಶವಮೂರ್ತಿಯವರಿಗೆ ಕೇಳಿದ್ರೆ, ನಾವು ಒಳಗೆ ವಾಹನಗಳನ್ನು ಬಿಟ್ಟರೆ ಸರಿಯಾಗಿ ವಾಹನಗಳನ್ನು ನಿಲ್ಲಿಸದೇ ನಮಗೆ ತೊಂದರೆ ನೀಡುತ್ತಾರೆ. ಇದರಿಂದ ಒಂದು ಶಿಸ್ತು ಇರೋದಿಲ್ಲ. ಇದರಿಂದ ತಾಲೂಕು ಕಚೇರಿಯ ಹೊರಗಡೆ ಪಾರ್ಕಿಂಗ್ಗೆ ಪುರಸಭೆಯ ಜಾಗವಿದ್ದು, ಮೆಂಟೇನೆನ್ಸ್ಗಾಗಿ ಫೀಸ್ ವಸೂಲಿ ಮಾಡುತ್ತಿದ್ದಾರೆ ವಿನಾ ಸಾರ್ವಜನಿಕರ ಸುಲಿಗೆ ಮಾಡುತ್ತಿಲ್ಲ ಎಂದಿದ್ದಾರೆ.