ದೊಡ್ಡಬಳ್ಳಾಪುರ: ನಗರದ ಮಹಿಳಾ ಸಮಾಜ ಕಸ್ತೂರಿ ಬಾ ಶಿಶು ವಿಹಾರಕ್ಕೆ ನಡೆದ ಚುನಾವಣೆಯಲ್ಲಿ ಆಪರೇಷನ್ ಕಮಲ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ರಾತ್ರೋರಾತ್ರಿ ನಡೆದ ಬೆಳವಣಿಗೆಯಲ್ಲಿ ಇಬ್ಬರು ನಿರ್ದೇಶಕರು ಬಿಜೆಪಿ ತೆಕ್ಕೆಗೆ ಜಾರಿದ್ದು, ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ವತ್ಸಲಾ ಅವರು ಗೆಲುವು ಸಾಧಿಸಿದ್ದಾರೆ.
ದೊಡ್ಡಬಳ್ಳಾಪುರ ನಗರದ ಹೃದಯಭಾಗದಲ್ಲಿರುವ ಮಹಿಳಾ ಸಮಾಜ ಕಸ್ತೂರಿ ಬಾ ಶಿಶು ವಿಹಾರವು ಮಹಿಳೆಯರ ಸಬಲೀಕರಣಕ್ಕೆ ದುಡಿಯುತ್ತಿರುವ ಸಂಸ್ಥೆ. ಯಾವುದೇ ರಾಜಕೀಯ ಪಕ್ಷದ ನೆರಳಿಲ್ಲದೇ ಎಲ್ಲ ವರ್ಗದ ಮಹಿಳೆಯರ ಸ್ವಾವಲಂಬಿ ಬದುಕಿಗಾಗಿ ಶ್ರಮಿಸುತ್ತಿದೆ. ಆದರೆ, ಮೊನ್ನೆ ಮಹಿಳಾ ಸಮಾಜದ ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಆಪರೇಷನ್ ಕಮಲದ ಸದ್ದು ಕೇಳಿ ಬಂದಿದೆ. ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯದರ್ಶಿ ಆಗಿರುವ ವತ್ಸಲಾ ಜಗನಾಥ್ ಮಹಿಳಾ ಸಮಾಜದ ಅಧ್ಯಕ್ಷರಾಗಿ ಚುನಾಯಿತರಾಗುವ ಮೂಲಕ ಅಪರೇಷನ್ ಕಮಲ ನಡೆದಿದೆ ಎನ್ನಲಾಗಿದೆ.
ಮಹಿಳಾ ಸಮಾಜ ಕಸ್ತೂರಿ ಬಾ ಶಿಶು ವಿಹಾರದಲ್ಲಿ ಒಟ್ಟು 9 ನಿರ್ದೇಶಕ ಸ್ಥಾನಗಳಿದ್ದು, ಕೆ.ಎಸ್. ಪ್ರಭಾ ಮತ್ತು ವತ್ಸಲಾ ಜಗನಾಥ್ ಬಣಗಳ ಅಭ್ಯರ್ಥಿಗಳು ನಿರ್ದೇಶಕ ಸ್ಥಾನಕ್ಕಾಗಿ ಚುನಾವಣೆಯಲ್ಲಿ ಸ್ವರ್ದಿಸಿದ್ದರು. ಚುನಾವಣೆಯಲ್ಲಿ ಕೆ.ಎಸ್.ಪ್ರಭಾ ಬಣದ 6 ಮಹಿಳೆಯರು ನಿರ್ದೇಶಕರಾಗಿ ಚುನಾಯಿತರಾದರೆ, ವತ್ಸಲಾ ಜಗನಾಥ್ ಬಣದ ಮೂವರು ಮಹಿಳೆಯರು ನಿರ್ದೇಶಕರಾಗಿ ಚುನಾಯಿತರಾಗಿದ್ದರು.
ಸಂಖ್ಯಾ ಬಲ ಇದ್ದ ಕೆ.ಎಸ್. ಪ್ರಭಾ ಬಣದವರೇ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗುವ ಎಲ್ಲ ಸಾಧ್ಯತೆ ಇತ್ತು. ಆದರಂತೆ ಕೆ.ಎಸ್.ಪ್ರಭಾ ಬಣದ ದೇವಕಿ ಎಲ್.ಸಿ ಅಧ್ಯಕ್ಷರಾಗಿ, ವರಲಕ್ಷ್ಮಿ.ಟಿ.ಪಿ ಉಪಾಧ್ಯಕ್ಷರಾಗಿ, ಸರೋಜಮ್ಮ ಕೆ.ಎಲ್ ಕಾರ್ಯದರ್ಶಿಯಾಗಿ ಯಶೋಧ ಖಜಾಂಜಿಯಾಗಿ ಆಯ್ಕೆಯಾಗುವ ಸಾಧ್ಯತೆ ಇತ್ತು.
ಇದನ್ನೂ ಓದಿ: ಆಪರೇಷನ್ ಕಮಲದ ಕುರಿತು ಸುಪ್ರೀಂ ಕೋರ್ಟ್ ಸ್ವಯಂ ದೂರು ದಾಖಲಿಸಿಕೊಳ್ಳಬೇಕು: ಡಿ.ಕೆ.ಶಿವಕುಮಾರ್
ಆದರೆ, ಅಕ್ಟೋಬರ್ 27 ರಾತ್ರಿ ನಡೆದ ಬೆಳವಣಿಗೆಯಲ್ಲಿ ಕೆ.ಎಸ್. ಪ್ರಭಾ ಬಣದಲ್ಲಿದ್ದ ವರಲಕ್ಷ್ಮಿ .ಟಿ.ಪಿ ಮತ್ತು ಸರೋಜಮ್ಮ.ಕೆ.ಎಲ್ ಎಂಬುವರು ವತ್ಸಲಾ ಜಗನಾಥ್ ಬಣಕ್ಕೆ ಸೇರಿದ್ದಾರೆ. ಅಕ್ಟೋಬರ್ 28 ರಂದು ನಡೆದ ಅಧ್ಯಕ್ಷ ಚುನಾವಣೆಯಲ್ಲಿ ವತ್ಸಲಾ ಜಗನ್ನಾಥ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ವರಲಕ್ಷ್ಮಿ.ಟಿ.ಪಿ ಉಪಾಧ್ಯಕ್ಷರಾಗಿ, ಸರೋಜಮ್ಮ ಕೆ.ಎಲ್ ಕಾರ್ಯದರ್ಶಿಯಾಗಿ ಆಯ್ಕೆಯಾಗುವ ಮೂಲಕ ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ ಎಂದು ಕೆ.ಎಸ್. ಪ್ರಭಾ ಬಣ ಆರೋಪಿಸಿದೆ. ಮಹಿಳಾ ಸಮಾಜಕ್ಕೆ ಇಲ್ಲಿಯವರೆಗೂ ರಾಜಕೀಯ ನೆರಳು ಬಿದ್ದಿರಲಿಲ್ಲ. ಆದರೆ ವತ್ಸಲಾ ಅಧ್ಯಕ್ಷರಾಗಲು ರಾಜಕೀಯ ಪ್ರಭಾವ ಬಳಸಿದ್ದಾರೆ.
ಆಪರೇಷನ್ ಕಮಲಕ್ಕೆ ಒಳಗಾದ ವರಲಕ್ಷ್ಮಿ .ಟಿ.ಪಿ ಮತ್ತು ಸರೋಜಮ್ಮ ಕೆ.ಎಸ್. ಪ್ರಭಾ ಬಣದಲ್ಲಿ ನೀಡಲಾಗಿದ್ದ ಸ್ಥಾನಗಳನ್ನೇ ವತ್ಸಲಾ ಬಣದಲ್ಲಿ ಪಡೆದಿದ್ದಾರೆ. ಹಣದ ಆಮಿಷಕ್ಕೆ ಒಳಗಾಗಿ ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ ಎಂದು ಅಧ್ಯಕ್ಷ ಸ್ಥಾನದ ಅಕಾಂಕ್ಷಿಯಾಗಿದ್ದ ದೇವಕಿ ಎಲ್.ಸಿ. ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಲೂಟಿ ಹೊಡೆದ ಹಣದಿಂದ ಆಪರೇಷನ್ ಕಮಲ: ಸಿದ್ದರಾಮಯ್ಯ
ವಿಧಾನಸಭೆ, ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ನಲ್ಲಿ ನಡೆಯುತ್ತಿದ್ದ ಆಪರೇಷನ್ ಕಮಲ ಈಗ ಮಹಿಳಾ ಸಮಾಜಕ್ಕೂ ಕಾಲಿಟ್ಟಿರುವುದು ದುರ್ದೈವದ ಸಂಗತಿ.