ದೊಡ್ಡಬಳ್ಳಾಪುರ: ಆನ್ಲೈನ್ ಆ್ಯಪ್ OLXನಲ್ಲಿ ಕೆಟಿಎಂ ಬೈಕ್ ಕೊಳ್ಳಲು ಹೋದ ಯುವಕ ವಂಚನೆಗೆ ಒಳಗಾಗಿದ್ದಾನೆ. ಬೈಕ್ ಮಾರುವುದಾಗಿ ಹೇಳಿದ ವಂಚಕ ಮುಂಚಿತವಾಗಿ ಗೂಗಲ್ ಪೇ ಮುಖಾಂತರ 10 ಸಾವಿರ ರೂಪಾಯಿ ತೆಗೆದುಕೊಂಡು ಫೋನ್ ಸ್ವಿಚ್ ಆಫ್ ಮಾಡಿದ್ದಾನೆ. ಇತ್ತ ವಂಚನೆ ಪ್ರಕರಣ ದಾಖಲಿಸಲು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಯುವಕ ಆರೋಪಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ವೀರಾಪುರ ಗ್ರಾಮದ ನಿವಾಸಿ ಸುರೇಶ್ ವಂಚನೆಗೊಳಗಾದ ಯುವಕ, ಮೂಲತಃ ದಾಂಡೇಲಿ ಮೂಲದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಇಂಡೋ ಮಿಮ್ ಕಾರ್ಖಾನೆ ಕಾರ್ಮಿಕ.
ಕಾರ್ಖಾನೆಯಿಂದ ಮನೆಗೆ ಓಡಾಡಲು ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಗೆ ಮುಂದಾದ ಸುರೇಶ್ ಆನ್ ಲೈನ್ ಮೊರೆಹೋಗಿದ್ದಾರೆ.
OLX ಆ್ಯಪ್ನಲ್ಲಿ ಮಾರಾಟಕ್ಕೆ ಇಟ್ಟಿದ್ದ ಕೆಟಿಎಂ RC 200 ಬೈಕ್ ಆತನ ಗಮನ ಸೆಳೆಯುತ್ತದೆ. ಬೈಕ್ ಮಾರಾಟಗಾರನ ಮೊಬೈಲ್ ನಂಬರ್ಗೆ ಕರೆ ಮಾಡಿ ಬೈಕ್ ಬೆಲೆ ಮಾತನಾಡಿದ್ದರು. ನೆಲಮಂಗಲದ ಉಮೇಶ್ ಗೌಡ ಎಂದು ಪರಿಚಯಿಸಿಕೊಂಡಿದ್ದ ಆತ, ಬೈಕ್ ಅನ್ನು ಒಂದು ಲಕ್ಷದ 20 ಸಾವಿರಕ್ಕೆ ಕೊಡುವುದಾಗಿ ಹೇಳಿದ್ದನಂತೆ.
ಮುಂಗಡವಾಗಿ 5 ಸಾವಿರ ರೂ. ಗೂಗಲ್ ಪೇ ನಲ್ಲಿ ಹಾಕಿಸಿಕೊಂಡು ಉಮೇಶ್ ಗೌಡ ನಂತರ ಒಮ್ಮೆ ಬೈಕ್ ನೋಡಿ ಹೋಗುವಂತೆ ಹೇಳಿ ಮತ್ತೆ 5 ಸಾವಿರ ಗೂಗಲ್ ಪೇ ಮಾಡಿಸಿಕೊಂಡಿದ್ದ. ಆದರೀಗ ಉಮೇಶ್ ಗೌಡನ ಫೋನ್ ಸ್ವಿಚ್ ಆಫ್ ಆಗಿದೆ. ಆನ್ಲೈನ್ನಲ್ಲಿ ವಂಚನೆಗೊಳಾದ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಹೋದರೆ ಪೊಲೀಸರು ನಿರಾಕರಿಸಿದ್ದಾಗಿ ಸುರೇಶ್ ಹೇಳಿದ್ದಾರೆ.
ಇದನ್ನೂ ಓದಿ: ಬ್ಯಾಂಕ್ನಲ್ಲಿ ಹಾಡಹಗಲೇ ಭಾರಿ ದರೋಡೆ.. ಸಿಬ್ಬಂದಿ ಕೂಡಿ ಹಾಕಿ 32 ಕೆಜಿ ಚಿನ್ನದೊಂದಿಗೆ ಖದೀಮರು ಎಸ್ಕೇಪ್