ಆನೇಕಲ್(ಬೆಂಗಳೂರು): ಕುಮಾರಸ್ವಾಮಿ ನನ್ನ ಬಳಿ ಪೆನ್ ಡ್ರೈವ್ ಇದೆ ಎಂದು ಒಂದು ವಾರದ ಹಿಂದೆ ಹೇಳಿದ್ದರು. ಪೆನ್ ಡ್ರೈವ್ ಇದ್ದಿದ್ದರೆ ಇಷ್ಟು ದಿನ ಇಟ್ಟುಕೊಳ್ಳುತ್ತಿದ್ದರಾ? ಎಂದು ವಸತಿ ಸಚಿವ ಜಮೀರ್ ಅಹ್ಮದ್ ಪ್ರಶ್ನಿಸಿದ್ದಾರೆ. ಆನೇಕಲ್ನ ಇಂಡ್ಲವಾಡಿಯಲ್ಲಿ ಮಾತನಾಡಿದ ಅವರು, ಹೀಗೆ ಏನೋ ಜೇಬಿನಿಂದ ತೆಗೆದು ತೋರಿಸಿದರು, ಇದ್ದಿದ್ದರೆ ಬಿಡೋರಾ ಅವರು. ಸ್ಪೀಕರ್ ಸಚಿವರನ್ನು ವಜಾ ಮಾಡಿದ್ರೆ, ಆಡಿಯೋ, ವಿಡಿಯೋ ರಿಲೀಸ್ ಮಾಡಲು ರೆಡಿ ಇದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದು ಮಾಧ್ಯದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿದ ಸಚಿವರು, ಮೊದಲು ಅವರು ರಿಲೀಸ್ ಮಾಡ್ಲಿ ಆಮೇಲೆ ನೋಡೋಣ ಎಂದರು.
ಮತ್ತೊಂದೆಡೆ, ರೈತರನ್ನು ಕಡೆಗಣಿಸಿ ಸೂರ್ಯ ನಗರ 4ನೇ ಹಂತ ಮಾಡಲಾಗುತ್ತಿದೆ ಎಂದು ರೈತರು ಗಲಾಟೆ ಮಾಡಿದ್ದಾರೆ. ಆನೇಕಲ್ನ ಇಂಡ್ಲವಾಡಿ ಬಳಿ ಆಯೋಜಿಸಿದ ಸಭೆಯಲ್ಲಿ ರೈತರು ಹಾಗೂ ಸ್ಥಳೀಯರ ನಡುವೆ ಈ ಕುರಿತು ವಾಗ್ವಾದ ನಡೆದಿದೆ. ಇನ್ನು ಈ ಗಲಾಟೆ, ಸಂಸದರು ಹಾಗೂ ಸಚಿವರ ಎದುರಿಗೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಇತ್ತ ರೈತರು ಹಾಗೂ ಸ್ಥಳೀಯರ ನಡುವೆ ಗಲಾಟೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿಯೇ ಜನಪ್ರತಿನಿಧಿಗಳು ಕಾರು ಹತ್ತಿ ಹೊರಟು ಹೋಗಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಸಂಸದ ಡಿಕೆ ಸುರೇಶ್, ಸಚಿವ ಜಮೀರ್ ಅಹ್ಮದ್ ಹಾಗೂ ಶಾಸಕ ಬಿ ಶಿವಣ್ಣ ನೇತೃತ್ವದಲ್ಲಿ ಈ ಸಭೆಯನ್ನ ಆಯೋಜಿಸಲಾಗಿತ್ತು.
ಇದನ್ನೂ ಓದಿ: ಅಧಿಕಾರಿ ವರ್ಗಾವಣೆ ವಿಚಾರ ಗದ್ದಲ: ಪರಿಶೀಲನೆ ನಡೆಸುವ ಸಚಿವರ ಭರವಸೆಯೊಂದಿಗೆ ಸುಖಾಂತ್ಯ
ನೀರು ಸರಬರಾಜು ಮಾಡದಿದ್ದಕ್ಕೆ ಬಡಾವಣೆ ನಿವಾಸಿಗಳ ಆಕ್ರೋಶ: ಕಳೆದ ಒಂದು ವಾರದಿಂದ ನೀರು ಸರಬರಾಜು ಮಾಡದಿದ್ದಕ್ಕೆ ಆಕ್ರೋಶಗೊಂಡ ಬಡಾವಣೆ ನಿವಾಸಿಗಳು ಏಕಾಏಕಿ ನಗರಸಭೆಯ ವ್ಯಾಪ್ತಿಯ ಪಂಪ್ ಹೌಸ್ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿರುವ ಘಟನೆ ರಾಯಚೂರಿನಲ್ಲಿ ಇಂದು ನಡೆದಿದೆ. ನಗರದ ಹೈದರಾಬಾದ್ ರಸ್ತೆಯಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ನೀರು ಸರಬರಾಜು ಘಟಕದಲ್ಲಿನ ಐಪಿ ಪಂಪ್ ಸೆಟ್ಗಳು ಹಾಳಾಗಿವೆ ಎಂದು ನೆಪವೊಡ್ಡಿ ವಾರದಿಂದ ಕುಡಿಯುವ ನೀರು ಬಿಡದೇ ನಗರಸಭೆ ಅಧಿಕಾರಿಗಳು ಬೇಜವಾಬ್ದಾರಿ ತನ ತೋರಿದ್ದಾರೆ ಎಂದು ಬಡಾವಣೆ ವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್‌ಬಿಎಸ್ ನಗರ, ಗಂಜ್ ಏರಿಯಾ, ಮಡ್ಡಿಪೇಟ, ಸಿಯಾತಲಾಬ್, ಅಂದ್ರೂನ್ ಕಿಲ್ಲಾ, ಮಕ್ತಲ್‌ಪೇಟೆ, ಬೇಸ್ತ್ರವಾರ ಪೇಟೆ, ಲೋಹರ ವಾಡಿಗಳಲ್ಲಿ ನೀರು ಸರಬರಾಜು ಮಾಡಬೇಕು. ಆದರೆ, ನೀರು ಪೂರೈಕೆಯಾಗಿಲ್ಲ. ಪರಿಣಾಮ ಜನರು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಐಪಿ ಪಂಪ್ಸೆಟ್ ಕೆಲಸ ಮಾಡುವ ಮೇಸ್ತ್ರಿ ಹುಸೇನಪ್ಪ ಮೋಟಾರುಗಳನ್ನು ಬಂದ್ ಮಾಡಿ ನೀರು ಬರದಂತೆ ಮಾಡುತ್ತಿದ್ದಾರೆ ಎಂದು ದೂರಿ ಎರಡ್ಮೂರು ಗಂಟೆಗಳ ಕಾಲ ಬಡಾವಣೆ ವಾಸಿಗಳು ಘಟಕದ ಮುಂಭಾಗ ಧರಣಿ ನಡೆಸಿದರು.
ಇದನ್ನೂ ಓದಿ: ಅಧಿಕಾರಿ ವರ್ಗಾವಣೆ ವಿಚಾರ ಗದ್ದಲ: ಪರಿಶೀಲನೆ ನಡೆಸುವ ಸಚಿವರ ಭರವಸೆಯೊಂದಿಗೆ ಸುಖಾಂತ್ಯ