ನವದೆಹಲಿ: ಕರ್ನಾಟಕದಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಕುರಿತಂತೆ ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ (ಎನ್‌ಸಿಆರ್‌ಬಿ) ಆಘಾತಕಾರಿ ಅಂಶಗಳನ್ನು ಹೊರಹಾಕಿದೆ. ಕಳೆದ ಆರು ವರ್ಷಗಳಲ್ಲೇ ಅತ್ಯಧಿಕ ಪ್ರಕರಣಗಳು 2021ರಲ್ಲಿ ದಾಖಲಾಗಿವೆ.
ರಾಜ್ಯದಲ್ಲಿ ಮಹಿಳೆಯರ ಮೇಲಿನ ಎಲ್ಲ ಅಪರಾಧ ಪ್ರಕರಣಗಳ ಬಗ್ಗೆ ಅಂಕಿ ಅಂಶ ಬಿಡುಗಡೆ ಮಾಡಿರುವ ಎನ್‌ಸಿಆರ್‌ಬಿ 2021ನೇ ಸಾಲಿನಲ್ಲಿ ಒಟ್ಟಾರೆ 14,468 ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದೆ. ಇದರ ಹಿಂದಿನ ವರ್ಷ ಈ ಪ್ರಕರಣಗಳ ಸಂಖ್ಯೆ 12,680 ಆಗಿತ್ತು.
ಒಂದೇ ವರ್ಷದಲ್ಲಿ ಸುಮಾರು ಎರಡು ಸಾವಿರ ಪ್ರಕರಣಗಳು ಹೆಚ್ಚುವರಿಯಾಗಿ ವರದಿಯಾಗಿವೆ ಎಂಬುವುದು ಕಳವಳಕಾರಿಯಾಗಿದೆ. 2016ರಲ್ಲಿ ಮಹಿಳೆಯರ ಮೇಲಿನ ಅಪರಾಧ ಕೇಸ್ಗಳು 14,131 ದಾಖಲಾಗಿದ್ದವು. ನಂತರ 2017, 2018, 2019 ಹಾಗೂ 2020ರಲ್ಲಿ ಕ್ರಮವಾಗಿ 14,078, 13,514, 13,828 ಹಾಗೂ 12,680 ಪ್ರಕರಣಗಳು ದಾಖಲಾಗಿದ್ದವು ಎಂದು ಎನ್‌ಸಿಆರ್‌ಬಿ ತಿಳಿಸಿದೆ.
ಅತಿ ಹೆಚ್ಚು ಹಲ್ಲೆ ಕೇಸ್ಗಳು: 2021ನೇ ಸಾಲಿನಲ್ಲಿ ದಾಖಲಾದ 14,468 ಪ್ರಕರಣಗಳ ಪೈಕಿ ಮಹಿಳೆಯರ ಮೇಲಿನ ಹಲ್ಲೆ ಕೇಸ್ಗಳೇ ಅಧಿಕವಾಗಿದೆ. ಇವುಗಳ ಸಂಖ್ಯೆ 5,985 ಆಗಿದ್ದು, ಕಳೆದ ನಾಲ್ಕು ವರ್ಷಗಳ ಹೆಚ್ಚು ವರದಿಯಾದ ಪ್ರಕರಣಗಳಾಗಿದೆ. 2018ರಲ್ಲಿ ಈ ಪ್ರಕರಣಗಳ 5,338 ಇತ್ತು. ನಂತರದ ಎರಡು ವರ್ಷಗಳಲ್ಲಿ ಕೊಂಚ ಕಡಿಮೆಯಾಗಿತ್ತು. ಅಂದರೆ 2019ರಲ್ಲಿ 5,186 ಹಾಗೂ 2019ರಲ್ಲಿ 5,248 ಪ್ರಕರಣಗಳು ದಾಖಲಾಗಿದ್ದವು.
920 ಜನ ಹೆಣ್ಣು ಮಕ್ಕಳು ಅಪಹರಣ: ಗಂಡ ಮತ್ತು ಆತನ ಮನೆಯವರ ಕ್ರೌರ್ಯದಿಂದಲೂ ಹೆಣ್ಣು ಮಕ್ಕಳು ನಲುಗಿ ಹೋಗಿದ್ದಾರೆ. 2018ರಲ್ಲಿ ಇಂತಹ ಪ್ರಕರಣಗಳ ಸಂಖ್ಯೆ 2,075, 2019ರಲ್ಲಿ 2,503 ಹಾಗೂ 2020ರಲ್ಲಿ 2092 ದಾಖಲಾಗಿದ್ದವು. 2021ರಲ್ಲಿ ಒಟ್ಟು 2,408 ಪ್ರಕರಣಗಳು ವರದಿಯಾಗಿದೆ.
ಇದೇ ವೇಳೆ ಅಪಹರಣಗಳು ಈ ಹಿಂದಿನ ನಾಲ್ಕು ವರ್ಷಗಳಿಗೆ ಹೋಲಿಕೆ ಮಾಡಿದರೆ ಕೊಂಚ ತಗ್ಗಿವೆ. 2018ರಲ್ಲಿ 1,285 ಮಹಿಳೆಯರ ಕಿಡ್ನಾಪ್ ಪ್ರಕರಣಗಳು ದಾಖಲಾಗಿತ್ತು. ನಂತರದಲ್ಲಿ 2019ರಲ್ಲಿ 1,110, 2020ರಲ್ಲಿ 951 ಹಾಗೂ 2021ರಲ್ಲಿ ಕಡಿಮೆ ಎಂದರೆ 920 ಅಪಹರಣ ಪ್ರಕರಣಗಳು ವರದಿಯಾಗಿದೆ.
555 ಅತ್ಯಾಚಾರ ಪ್ರಕರಣಗಳು: ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಆತಂಕ ಮೂಡಿಸುವಂತೆ ಇದ್ದು, 2021ರ ಒಂದೇ ವರ್ಷದಲ್ಲಿ 555 ರೇಪ್ ಕೇಸ್ಗಳು ದಾಖಲಾಗಿವೆ. ಇವುಗಳ ಸಂಖ್ಯೆ ಕೂಡ ಕಳೆದ ನಾಲ್ಕು ವರ್ಷಗಳ ಅಧಿಕವಾಗಿದೆ. 2018, 2018 ಹಾಗೂ 2020ರಲ್ಲಿ ಕ್ರಮವಾಗಿ 497, 505 ಹಾಗೂ 504 ಅತ್ಯಾಚಾರ ಪ್ರಕರಣಗಳು ವದರಿಯಾಗಿದ್ದವು.
ಇದಲ್ಲದೇ, ಅತ್ಯಾಚಾರ ಮತ್ತು ಕೊಲೆ ಹಾಗೂ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಕೂಡ ಆಘಾತಕಾರಿಯಾಗಿದೆ. 2018ರಲ್ಲಿ 16, 2019ರಲ್ಲಿ 23 ಹಾಗೂ 2020ರಲ್ಲಿ 8 ಇಂತಹ ಪ್ರಕರಣಗಳು ದಾಖಲಾಗಿದ್ದವು. ಆದರೆ, 2021ರಲ್ಲಿ ಈ ಪ್ರಕರಣಗಳ ಸಂಖ್ಯೆ ಡಬಲ್ ಆಗಿದ್ದು, ಒಟ್ಟು 20 ರೇಪ್ ಅಂಡ್ ಮರ್ಡರ್, ಗ್ಯಾಂಗ್ರೇಪ್ ಕೇಸ್ಗಳು ವರದಿಯಾಗಿವೆ.
ವರದಕ್ಷಿಣೆಗೆ 163 ಜನ ಬಲಿ: ರಾಜ್ಯದಲ್ಲಿ ವರದಕ್ಷಿಣೆ ಪಿಡುಗು ಇನ್ನೂ ಕಾಡುತ್ತಲೇ ಎಂದು ಎನ್‌ಸಿಆರ್‌ಬಿ ವರದಿಯಿಂದ ಮತ್ತೆ ಸಾಬೀತಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ವರ್ಷದಿಂದ ವರ್ಷಕ್ಕೆ ವರದಕ್ಷಿಣೆ ಸಾವಿನ ಪ್ರಕರಣಗಳು ಕಡಿಮೆ ದಾಖಲಾಗುತ್ತಿವೆ. ಆದರೂ, ಅವುಗಳು ಸಂಖ್ಯೆ ಇನ್ನು ಕಳವಳ ಪಡಿಸುವಂತೆ ಇದೆ. ಯಾಕೆಂದರೆ, 2021ರಲ್ಲಿ 163 ಜನ ಮಹಿಳೆಯರು ವರದಕ್ಷಿಣೆಗೆ ಬಲಿಯಾಗಿದ್ದಾರೆ.
ಈ ಹಿಂದೆ 2018, 2019 ಹಾಗೂ 2020ರಲ್ಲಿ ಕ್ರಮವಾಗಿ 202, 203 ಹಾಗೂ 178 ವರದಕ್ಷಿಣೆ ಸಾವಿನ ಪ್ರಕರಣಗಳು ವರದಿಯಾಗಿದ್ದವು. ಇನ್ನು, ಮಹಿಳೆಯರ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣಗಳು ಸಾಕಷ್ಟು ದಾಖಲಾಗಿದೆ. 2018ರಲ್ಲಿ 351, 2019ರಲ್ಲಿ 343, 2020ರಲ್ಲಿ 263 ಹಾಗೂ 311 ಇಂತಹ ಪ್ರಕರಣಗಳು ವರದಿಯಾಗಿವೆ.
ಎರಡು ವರ್ಷಗಳಲ್ಲಿ ಸೈಬರ್ ಕ್ರೈಂ ಇಳಿಕೆ: ಸೈಬರ್ ಕ್ರೈಂ ಕೇಸ್ಗಳ ಸಂಖ್ಯೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಇಳಿಕೆಯಾಗಿದೆ. 2016ರಲ್ಲಿ ಈ ಪ್ರಕರಣಗಳ ಸಂಖ್ಯೆ ಕೇವಲ 1,101 ಮಾತ್ರವೇ ಆಗಿತ್ತು. 2017ರಲ್ಲಿ 3,174 ಹಾಗೂ 5,839ಕ್ಕೆ ಏರಿಕೆಯಾಗಿದ್ದ ಪ್ರಕರಣಗಳು ನಂತರದಲ್ಲಿ 2019 ಮತ್ತು 2020ರಲ್ಲಿ ಕ್ರಮವಾಗಿ 12,020 ಮತ್ತು 10,741ಕ್ಕೆ ಜಿಗಿದಿದ್ದವು. ಆದರೆ, 2021ರಲ್ಲಿ ಈ ಪ್ರಕರಣಗಳ ಸಂಖ್ಯೆ 8,136ಕ್ಕೆ ಇಳಿಕೆಯಾಗಿದೆ.
ಇದನ್ನೂ ಓದಿ: ಆತ್ಮಹತ್ಯೆ ಪ್ರಕರಣದಲ್ಲಿ ಮಹಾರಾಷ್ಟ್ರ ನಂಬರ್ ಒನ್, ಕರ್ನಾಟಕಕ್ಕೆ ಐದನೇ ಸ್ಥಾನ