ಬೆಂಗಳೂರು: ಅಪರಿಚಿತ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ದೊಡ್ಡಬಳ್ಳಾಪುರದ ಜಾಲಿಗೆರೆ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಕೊಳೆತು ನಾರುತ್ತಿದ್ದ ಶವ ದನಗಾಹಿಗಳ ಗಮನಕ್ಕೆ ಬಂದಾಗ ಪೊಲೀಸರಿಗೆ ವಿಷಯ ತಿಳಿಸಿದ್ದರು. ದನ ಮೇಯಿಸಲು ಹೋದಾಗ ಬಂಡೆಗಳ ಮಧ್ಯೆ ಕೊಳೆತು ನಾರುತ್ತಿದ್ದ ಶವ ಕಣ್ಣಿಗೆ ಬಿದ್ದಿತ್ತು. ಸುದ್ದಿ ತಿಳಿದ ತಕ್ಷಣವೇ ದೊಡ್ಡ ಬೆಳವಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಮಾರು 40 ವರ್ಷದ ಪುರುಷನ ಶವ ಆಗಿದ್ದು, ವ್ಯಕ್ತಿಯ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಲಾಗಿದೆ. ಹೀಗಾಗಿ ಶವದ ಗುರುತು ಇನ್ನೂ ಪತ್ತೆಯಾಗಿಲ್ಲ.
ಇನ್ನು ಮೃತ ದೇಹದಲ್ಲಿ ಚಿನ್ನದ ಸರ ಮತ್ತು ಉಂಗುರ ಹಾಗೆಯೇ ಇದ್ದು, ವೈಯಕ್ತಿಕ ಕಾರಣಕ್ಕೆ ಕೊಲೆ ಮಾಡಿರುವ ಸಾಧ್ಯತೆ ಇದೆ. ಗುರುತು ಸಿಗಬಾರದು ಅನ್ನುವ ಕಾರಣಕ್ಕೆ ಬೇರೆಡೆ ಕೊಲೆ ಮಾಡಿ ಜಾಲಿಗೆರೆ ಅರಣ್ಯದಲ್ಲಿ ಶವ ಬಿಸಾಕಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಶವದ ಶರ್ಟ್ ಜೇಬಿನಲ್ಲಿ ನೆಲಮಂಗಲದ ಬಳಿ ಬಸ್ನಲ್ಲಿರುವ ಓಡಾಡಿರುವ ಬಸ್ ಟಿಕೆಟ್ ಸಿಕ್ಕಿದ್ದು, ಅದರ ಜಾಡಿನ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.