ದೊಡ್ಡಬಳ್ಳಾಪುರ: ಲೋಕಸಭಾ ಚುನಾವಣೆ ಮುನ್ನ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವಂತೆ ದೇವರಲ್ಲಿ ಹರಕೆ ಹೊತ್ತಿದ್ದ ನಮೋ ಅಭಿಮಾನಿಗಳು, ಅವರು ಪ್ರಧಾನಿಯಾದ ಹಿನ್ನೆಲೆಯಲ್ಲಿ ಹರಕೆ ತೀರಿಸಲು ಉಡುಪಿಯಿಂದ ತಿರುಪತಿಗೆ ಪಾದಯಾತ್ರೆ ಹೊರಟ್ಟಿದ್ದಾರೆ.
ಉಡುಪಿ ಜಿಲ್ಲೆಯ ಹರಿಖಂಡಿಗೆಯ ಶ್ರೀಕಾಂತ್ ಭಟ್ ಮತ್ತು ಜಗದೀಶ್ ಬಾಳಿಗ ಮೋದಿ ಅಭಿಮಾನಿಗಳು. ಇವರು ಕಳೆದ ಲೋಕಸಭಾ ಚುನಾವಣೆ ವೇಳೆ ಮೋದಿ ಪೂರ್ಣ ಬೆಂಬಲದೊಂದಿಗೆ ಮತ್ತೊಮ್ಮೆ ಪ್ರಧಾನಿಯಾದರೆ ಹರಿಖಂಡಿಗೆಯ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಿಂದ ತಿರುಪತಿಗೆ ಕಾಲ್ನಡಿಗೆಯಲ್ಲಿ ಪಾದಯಾತ್ರೆ ಹೋಗುವುದಾಗಿ ಹರಕೆ ಹೊತ್ತಿದ್ದರು. ಸದ್ಯ ಅವರ ಹರಕೆ ಫಲಿಸಿದ್ದು, ಹರಕೆ ತೀರಿಸಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಹೊರಟ್ಟಿದ್ದಾರೆ. ಈ ನಡುವೆ ದೊಡ್ಡಬಳ್ಳಾಪುರದಲ್ಲಿ ಈಟಿವಿ ಭಾರತಕ್ಕೆ ಸಿಕ್ಕ ನಮೋ ಅಭಿಮಾನಿಗಳು ತಮ್ಮ ಪಾದಯಾತ್ರೆಯ ಅನುಭವ ಹಂಚಿಕೊಂಡರು.
650 ಕಿ.ಮೀ ಪಾದಯಾತ್ರೆ, 18 ದಿನಗಳ ಕಾಲ್ನಡಿಗೆ:
ಜೂನ್ 15ರಂದು ಹರಿಖಂಡಿಗೆಯ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಶ್ರೀಕಾಂತ್ ಭಟ್ ಮತ್ತು ಜಗದೀಶ್ ಬಾಳಿಗ ತಿರುಪತಿಗೆ ಪಾದಯಾತ್ರೆ ಆರಂಭಿಸಿದರು. ನಮೋ ಅಭಿಮಾನಿಗಳ ಪಾದಯಾತ್ರೆ ದೊಡ್ಡಬಳ್ಳಾಪುರದ ಮೂಲಕ ಹಾದು ಕೋಲಾರ ಮಾರ್ಗವಾಗಿ ತಿರುಪತಿಗೆ ಹೋಗಲಿದ್ದಾರೆ. ಈ ಕುರಿತು ಮಾತನಾಡಿದ ಅವರು ಇನ್ನೊಂದು ವಾರದಲ್ಲಿ ತಿರುಪತಿಯನ್ನು ಸೇರಿ ಹರಕೆ ತಿರಿಸುವುದಾಗಿ ಹೇಳಿದರು. ಇವರು ಪ್ರತಿದಿನ 35ರಿಂದ 40 ಕಿ.ಮೀ ನಡೆಯುವ ಯೋಜನೆ ಹಾಕಿಕೊಂಡಿದ್ದಾರೆ. ದಾರಿ ಮಧ್ಯೆ ಸಿಗುವ ಮೋದಿ ಅಭಿಮಾನಿಗಳೇ ತಿಂಡಿ ಊಟ ಮತ್ತು ರಾತ್ರಿ ವಾಸ್ತವ್ಯದ ವ್ಯವಸ್ಥೆ ನೋಡಿಕೊಳ್ಳುತ್ತಾರಂತೆ.
ಕಿವಿಯಲ್ಲಿ ಒಲೆಯಾದ ನಮೋ ಅಕ್ಷರಗಳು:
ಶ್ರೀಕಾಂತ್ ಭಟ್ ತಮ್ಮ ಒಂದು ಕಿವಿಗೆ 'ನ' ಅಕ್ಷರದ ಓಲೆ ಮತ್ತೊಂದು ಕಿವಿಯಲ್ಲಿ 'ಮೋ' ಅಕ್ಷರದ ಒಲೆಯನ್ನು ಹಾಕಿಕೊಂಡಿದ್ದಾರೆ. ಆ ಮೂಲಕ ಮೋದಿ ಮೇಲಿನ ಅಪಾರವಾದ ಅಭಿಮಾನವನ್ನು ಮೆರೆದಿದ್ದಾರೆ.