ಹೊಸಕೋಟೆ : ಉಪ ಚುನಾವಣೆಯಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿರುವ ಹೊಸಕೋಟೆಯಲ್ಲಿಂದು ಎಂಟಿಬಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಸಿಎಂ ಬಿಎಸ್‌ವೈ ಸೇರಿದಂತೆ ಬಿಜೆಪಿ ಸಚಿವರು ಶಾಸಕರನ್ನ ನಾಮಪತ್ರಕ್ಕೆ ಸಲ್ಲಿಸಲು ಕರೆಸುವುದರ ಮೂಲಕ ಎದುರಾಳಿಗಳ ವಿರುದ್ದ ಶಕ್ತಿ ಪ್ರದರ್ಶನ ತೋರಿದ್ದಾರೆ.
ಹೊಸಕೋಟೆಯಲ್ಲಿ ಈಗಾಗಲೇ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ತಮ್ಮ ಶಕ್ತಿ ಪ್ರದರ್ಶನ ತೋರಿಸಿದ್ದಾರೆ. ಹೀಗಾಗಿ ನಾಮಪತ್ರ ಹಾಕಲು ಕೊನೆಯ ದಿನವಾದ ಇಂದು ಎಂಟಿಬಿ ಬಿಜೆಪಿ ಅಭ್ಯರ್ಥಿಯಾಗಿ ಎರಡನೇ ಭಾರಿಗೆ ನಾಮಪತ್ರ ಸಲ್ಲಿಸುವ ಹೆಸರಲ್ಲಿ ಭರ್ಜರಿ ಜನ ಸೇರಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಬೆಳಗ್ಗೆ ಕೆಇಬಿ ಸರ್ಕಲ್‌ನಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮುಖಾಂತರ ಸಚಿವ ಆರ್ ಅಶೋಕ್, ಸಂಸದ ಮುನಿಸ್ವಾಮಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಜೊತೆಯಲ್ಲಿ ಆಗಮಿಸಿದ ಎಂಟಿಬಿ ಎದುರಾಳಿಗಳಿಗೆ ಟಾಂಗ್ ನೀಡಿದ್ರು. ಅಲ್ಲದೆ ತಾನು ಮೈತ್ರಿ ಸರ್ಕಾರದಲ್ಲಿದ್ದಾಗ ಕಾಂಗ್ರೆಸ್‌ಗೆ ರಾಜೀನಾಮೆ ಕೊಡಲು ಇದ್ದ ಕಾರಣಗಳನ್ನ ಜನರ ಮುಂದೆ ಬಹಿರಂಗಪಡಿಸಿದ್ರು.
ತಡವಾಗಿ ಬಂದ ಸಿಎಂ ಯಡಿಯೂರಪ್ಪ ಪ್ರಚಾರದಲ್ಲಿ ಸೇರಿಕೊಂಡರು. ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಸಿಎಂ ಬಿಎಸ್‌ವೈ ಬದಲಾವಣೆ ತರುವ ದೃಷ್ಟಿಯಿಂದ ಎಂಟಿಬಿ ರಾಜೀನಾಮೆ ಕೊಟ್ಟು ನಮ್ಮ ಜತೆ ಬಂದಿದ್ದಾರೆ. ಕೆಲ ನಾಯಕರು ದೊಂಬರಾಟ ಮಾಡ್ತಿದ್ದಾರೆ. ಯಾವುದೇ ಶಕ್ತಿ ಕೂಡ ಎಂಟಿಬಿ ಗೆಲವು ತಡೆಯಲು ಸಾಧ್ಯವಿಲ್ಲ ಎಂದ ಸಿಎಂ, ನಾನು ಯಾರ ಹೆಸರು ಹಿಡಿದು ಮಾತನಾಡಲ್ಲ. ಆದರೆ, ಪಕ್ಷಕ್ಕೆ ದ್ರೋಹ ಬಗೆದವರಿಗೆ ಯಾವತ್ತೂ ಒಳ್ಳೆಯದು ಆಗೋದಿಲ್ಲ ಎಂದು ಪರೋಕ್ಷವಾಗಿ ಸ್ವತಂತ್ರ ಅಭ್ಯರ್ಥಿ ಶರತ್ ಬಚ್ಚೇಗೌಡ ವಿರುದ್ಧ ಬಿಎಸ್ವೈ ಕಿಡಿಕಾರಿದರು. ಅಲ್ಲದೆ ಎಂಟಿಬಿ ಗೆದ್ದ 24 ಗಂಟೆಗಳಲ್ಲಿ ಒಳ್ಳೆಯ ಮಂತ್ರಿ ಆಗಿ ನಿಮ್ಮ ಕ್ಷೇತ್ರಕ್ಕೆ ಬರ್ತಾರೆ. ಎಂಟಿಬಿಯನ್ನ ಬೆಂಬಲಿಸಿ ಎಂದರು.