ಬೆಂಗಳೂರು: ಕನಕಪುರದಲ್ಲಿ ಕೊರೊನಾ ಸೋಂಕಿನ ಮಹಾಮಾರಿ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂದು ಜನಪ್ರತಿನಿಧಿಗಳ ಸಭೆ ಕರೆದಿದ್ದೇವೆ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನಕಪುರದಲ್ಲಿ ಸೋಂಕು ಹೆಚ್ಚುತ್ತಿದೆ. ಡಾಕ್ಟರ್, ವ್ಯಾಪಾರಿಯಿಂದ ಸೋಂಕು ಹರಡುತ್ತಿದೆ. ಪ್ರತಿನಿತ್ಯ ನೂರಾರು ಜನರನ್ನ ವೈದ್ಯರು ತಪಾಸಣೆ ಮಾಡುತ್ತಿದ್ದರು. ವ್ಯಾಪಾರಿ ಅಂಗಡಿಗೂ ನೂರಾರು ಜನ ಭೇಟಿ ನೀಡುತ್ತಿದ್ದರು. ಹೀಗಾಗಿ ಅಧಿಕಾರಿ, ಜನಪ್ರತಿನಿಧಿಗಳ ಸಭೆ ಕರೆದಿದ್ದೇವೆ. ಕೊರೊನಾ ಸೋಂಕು ನಿಯಂತ್ರಣದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.
ಎಲ್ಲಾ ಸಚಿವರು ಪ್ರವಾಸದ ವೇಳೆ ಸಭೆ ಮಾಡಿದ್ದಾರೆ. ಆ ಸಭೆಗಳಿಗೆ ನಮ್ಮನ್ನ ಆಹ್ವಾನಿಸಿಲ್ಲ. ನಾನಷ್ಟೇ ಅಲ್ಲ, ಶಾಸಕರನ್ನೂ ಸಭೆಗೆ ಕರೆದಿಲ್ಲ. ಹೀಗಾಗಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ನಾವು ಸಭೆಗೆ ಬೇಡ ಅಂದರೆ ಪರವಾಗಿಲ್ಲ. ಅವರೇ ಬೇಕಾದರೆ ಸಭೆಯನ್ನ ಮಾಡಿಕೊಳ್ಳಲಿ. ಆದರೆ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರ ಸಹಕಾರ ಮುಖ್ಯ. ಅದನ್ನ ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಡಿಸಿಎಂ ಅಶ್ವಥ್ ನಾರಾಯಣ್ ವಿರುದ್ಧ ಡಿ.ಕೆ. ಸುರೇಶ್ ಅಸಮಾಧಾನ ಹೊರಹಾಕಿದ್ದಾರೆ.
ಜುಲೈ 2ರಂದು ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ವಿಚಾರ ಮಾತನಾಡಿ, ಸಿಎಂ ಯಾವಾಗ ಬೇಕಾದರೂ ಮಾಡಿಕೊಳ್ಳಿ ಅಂದಿದ್ದಾರೆ. ಅದಕ್ಕೆ ಕಾರ್ಯಕ್ರಮ ಮಾಡ್ತೇವೆ ಎಂದಿದ್ದಾರೆ ಸಂಸದ ಡಿ ಕೆ ಸುರೇಶ್.
ಚೀನಾ- ಭಾರತ ಗಡಿಭಾಗದಲ್ಲಿ ಸೈನಿಕರ ಘರ್ಷಣೆ ವಿಚಾರವಾಗಿ ಮಾತನಾಡಿ, ಬಾರ್ಡರ್ ಕ್ರಾಸ್ ಮಾಡಿಲ್ಲ ಅಂದ್ರೆ ಸೈನಿಕರು ಹುತಾತ್ಮರಾಗಿದ್ದೇಕೆ?. ಗಡಿಯ ಯಾವ ಕಡೆ ಸಂಘರ್ಷ ನಡೆದಿದೆ ಎಂದು ಗೊತ್ತಾಗಬೇಕಿದೆ. ಇದರಲ್ಲೇನೋ ಮಸಲತ್ತು ನಡೆಯುತ್ತಿದೆ ಎಂದು ಸಂಸದ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ.