ಹೊಸಕೋಟೆ (ಬೆಂ.ಗ್ರಾ): ವಾಟರ್ ಹೀಟರ್ನಿಂದ ವಿದ್ಯುತ್ ಪ್ರವಹಿಸಿ ತಾಯಿ, ಮಗು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕನಕ ನಗರದಲ್ಲಿ ನಡೆದಿದೆ. ರಾಯಚೂರು ಮೂಲದ ತಾಯಿ ಜ್ಯೋತಿ ಮತ್ತು ಮಗ ಜಯಾನಂದ್(4) ಮೃತ ದುರ್ದೈವಿಗಳು.
ಫೆಬ್ರವರಿ 26, ಭಾನುವಾರದಂದು ಮಧ್ಯಾಹ್ನ ಜ್ಯೋತಿ ಅವರು ಶೌಚಾಲಯದಲ್ಲಿ ನೀರು ಕಾಯಿಸಲು ಹೀಟರ್ ಹಾಕಿದ್ದರು. ಈ ವೇಳೆ, ಶೌಚಾಲಯಕ್ಕೆ ಬಾಲಕ ತೆರಳಿದ್ದು, ಹೀಟರ್ ಅನ್ನು ಮೈಮೇಲೆ ಬೀಳಿಸಿಕೊಂಡಿದ್ದಾನೆ. ಈ ವೇಳೆ, ಆತನಿಗೆ ಕರೆಂಟ್ ಶಾಕ್ ಹೊಡೆದಿದೆ. ಶಾಕ್ನಿಂದ ಒದ್ದಾಡುತ್ತಿದ್ದ ಮಗನನ್ನು ರಕ್ಷಿಸಲು ಹೋದ ತಾಯಿಗೂ ವಿದ್ಯುತ್ ಪ್ರವಹಿಸಿದ್ದು ತಾಯಿ, ಮಗ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜ್ಯೋತಿ ಮತ್ತು ಅವರ ಪತಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಗುಡಿಸಲಿಗೆ ಬೆಂಕಿ, ಒಬ್ಬ ಸಜೀವ ದಹನ: ಗುಡಿಸಲು ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಗುಡಿಸಲಿನಲ್ಲಿ ವಾಸವಿದ್ದ ಕುರಿಗಾಹಿ ಆಕಸ್ಮಿಕ ಬೆಂಕಿ ಅವಘಡದಲ್ಲಿ ಸಿಲುಕಿ ಸಜೀವ ದಹನವಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ವೆಂಕಟಪುರ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ನರಸಿಂಹಪ್ಪ (50) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಒಬ್ಬ ಹುಡುಗಿಗಾಗಿ ಓರ್ವ ಕೊಲೆ, ಇನ್ನೊಬ್ಬ ಜೈಲು ಪಾಲು: ನನ್ನ ಮಗ ಒಬ್ಬನೇ ಈ ಕೊಲೆ ಮಾಡಲು ಸಾಧ್ಯವಿಲ್ಲ ಎಂದ ತಂದೆ
ಬಾಗೇಪಲ್ಲಿ ತಾಲೂಕಿನ ವೆಂಕಟಾಪುರ ಗ್ರಾಮದ ಗುಡ್ಡಗಾಡು ಪ್ರದೇಶದಲ್ಲಿ ತಡ ರಾತ್ರಿ ಬೆಂಕಿ ಅವಘಡ ಸಂಭವಿಸಿದೆ. ಕುರಿ ಮೇಯಿಸಿಕೊಂಡು ಜೀವನ ಸಾಗಿಸುತ್ತಿದ್ದ ನರಸಿಂಹಪ್ಪ ಸೇರಿದಂತೆ 5 ಕುರಿಗಳು ಸಜೀವ ದಹನವಾಗಿದೆ. ಘಟನಾ ಸ್ಥಳಕ್ಕೆ ಚೇಳೂರು ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ರವಿಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೇಸು ದಾಖಲಿಸಿದ್ದಾರೆ.
ವಿಜಯಪುರದಲ್ಲಿ ಗುಡಿಸಲಿಗೆ ಆಕಸ್ಮಿಕ ಬೆಂಕಿ: ವಿಜಯಪುರದಲ್ಲಿ ಗುಡಿಸಲಿಗೆ ಬೆಂಕಿ ತಗುಲಿ ದಂಪತಿಗಳಿಬ್ಬರು ಮೃತಪಟ್ಟ ಘಟನೆ ನಡೆದಿತ್ತು. ಜಿಲ್ಲೆಯ ಚಡಚಣ ಪಟ್ಟಣದ ಹೊರವಲಯದಲ್ಲಿ ಶನಿವಾರ ರಾತ್ರಿ ಆಕಸ್ಮಿಕ ಬೆಂಕಿ ಅನಾಹುತಕ್ಕೆ ಕರೀಂಸಾಬ್ ಟಪಾಲ್ ಮತ್ತು ಅವರ ಪತ್ನಿ ಸಾಜನಬಿ ಟಪಾಲ್ ಸಜೀವ ದಹನವಾಗಿದ್ದರು. ಗುಡಿಸಲಿನಲ್ಲಿ ಮಲಗಿದ್ದಾಗ ಚಿಮಣಿಯಿಂದ ಈ ಅನಾಹುತ ಸಂಭವಿಸಿರುವುದಾಗಿ ಶಂಕಿಸಲಾಗಿತ್ತು.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಮನೆ ಬೆಂಕಿಗಾಹುತಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಇಡೀ ಮನೆ ಬೆಂಕಿಗಾಹುತಿಯಾಗಿ ರೇಷನ್, ಬಟ್ಟೆಗಳು, ಹಣ ಸೇರಿದಂತೆ ದಾಖಲೆ ಪತ್ರಗಳು ಸುಟ್ಟು ಭಸ್ಮವಾಗಿರುವ ಘಟನೆ ದೊಡ್ಡಬಳ್ಳಾಪುರದ ರಾಜೀವ್ ಗಾಂಧಿ ಬಡಾವಣೆಯಲ್ಲಿ ಫೆಬ್ರವರಿ 24 ರಂದು ಸಂಭವಿಸಿತ್ತು. ವಿದ್ಯುತ್ ಅವಘಡದಲ್ಲಿ ಅಂಬಿಕಾ ಮತ್ತು ಸೋಮಶೇಖರ್ ದಂಪತಿ ವಾಸವಾಗಿದ್ದ ಮನೆ ಸಂಪೂರ್ಣವಾಗಿ ಸುಟ್ಟು ಬೂದಿಯಾಗಿತ್ತು. ಅದೃಷ್ಟವಶಾತ್ ಗಂಡ, ಹೆಂಡತಿ, ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದರು.
ಇದನ್ನೂ ಓದಿ: ಕೊಳದ ಮಧ್ಯೆ ಪಲ್ಟಿಯಾದ ಬೋಟ್.. ನಾಲ್ಕು ಜನ ನಾಪತ್ತೆ, ಇಬ್ಬರ ದೇಹ ಪತ್ತೆ.. ಈಜಿ ದಡ ಸೇರಿದ ನಾಲ್ವರು