ಬೆಂಗಳೂರು: ಗಾಂಧಿ ಜಯಂತಿಯ ಪ್ರಯುಕ್ತ ನಗರದ ಇನ್ಫೋಸಿಸ್ ಕನ್‌ವೆನ್ಷನ್ ಹಾಲ್‌ನಲ್ಲಿ ಎಲ್ಸಿಯಾ ಟ್ರಸ್ಟ್ ವತಿಯಿಂದ ಗಾಂಧಿಯ ಬಾಲ್ಯ ಜೀವನ ಕುರಿತ ‘ಮೋಹನದಾಸ’ ಚಿತ್ರವನ್ನು ಸರ್ಕಾರಿ ಶಾಲೆಯ ಸುಮಾರು1600 ಮಕ್ಕಳಿಗೆ ವಿಶೇಷ ಪ್ರದರ್ಶನ ಮಾಡಲಾಯಿತು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್, ಚಿತ್ರ ನಿರ್ದೇಶಕ ಪಿ. ಶೇಷಾದ್ರಿ, ನಟಿ ಶೃತಿ, ಬಾಲ ಕಲಾವಿದ ಸಮರ್ಥ ಮತ್ತು ಪರಮ್ ಸ್ವಾಮಿ ಮಕ್ಕಳ ಜೊತೆಗೆ ಸಿನಿಮಾ ವೀಕ್ಷಿಸಿದರು.
ಗಾಂಧಿಯ ಮುಖ್ಯ ತತ್ವಗಳಲ್ಲೊಂದಾದ ಕೆಟ್ಟದ್ದನ್ನು ಆಡುವುದಿಲ್ಲ’ ಎಂಬ ಮಾತುಗಳನ್ನು ಬೋಧಿಸುತ್ತಾ ಎಲ್ಲರೂ ಇದನ್ನು ಪಾಲಿಸಿದರೆ ಸಮಾಜ ಆರೋಗ್ಯಕರವಾಗಿರುತ್ತದೆ. ಅಲ್ಲದೇ ರಾಜ್ಯ ಸರ್ಕಾರದ ತಮ್ಮ ಎಲ್ಲಾ ಸಂಪುಟ ಸಚಿವರಿಗೆ ಈ ಚಲನಚಿತ್ರದ ಪ್ರದರ್ಶನ ಏರ್ಪಡಿಸುತ್ತೇನೆ ಹಾಗೂ ರಾಜ್ಯದ ಎಲ್ಲ ಮಕ್ಕಳೂ ಈ ಚಲನಚಿತ್ರ ನೋಡುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.
ಮಿತ್ರಚಿತ್ರ ನಿರ್ಮಾಣದ ಪಿ. ಶೇಷಾದ್ರಿ ನಿರ್ದೇಶನದ ಗಾಂಧಿಯ ಬಾಲ್ಯ ಕುರಿತ ‘ಮೋಹನದಾಸ’ ಚಿತ್ರ ಗಾಂಧಿಯವರು ಜನಿಸಿದ ಮತ್ತು ಜೀವಿಸಿದ್ದ ಜಾಗಗಳಲ್ಲಿ ಚಿತ್ರೀಕರಣಗೊಂಡಿದೆ. ಅಲ್ಲದೆ ಇಲ್ಲಿಯವರೆಗೆ ದೇಶದಲ್ಲಿ ಗಾಂಧೀಜಿಯ ಬದುಕಿನ ಬಗ್ಗೆ ಎರಡು ಕಥಾನಕ ಚಿತ್ರಗಳು ಮಾತ್ರ ಬಂದಿದ್ದು, ಇದು ಮೂರನೇ ಚಿತ್ರವಾಗಿರುವುದು ವಿಶೇಷವಾಗಿದೆ.