ಬೆಂಗಳೂರು: ಈ ಬಾರಿಯ ಉತ್ತಮ ಮಳೆಯಿಂದ ಒಳ್ಳೆಯ ರಾಗಿ ಫಸಲು ಬಂದಿತ್ತು. ಆದರೆ ಇದೇ ಮಳೆಯು ಕೊಯ್ಲು ಸಮಯದಲ್ಲೂ ಸುರಿಯುತ್ತಿರುವುದರಿಂದ ರೈತರಿಗೆ ಕೈಗೆ ಬಂದ ಫಸಲು ಮಳೆಯಿಂದ ಹಾಳಾಗುವ ಆತಂಕದಲ್ಲಿದ್ದಾರೆ ರೈತರು.
ಈ ವರ್ಷದ ಆರಂಭದಲ್ಲಿಯೇ ಕೊರಾನಾಸುರನ ಅರ್ಭಟದಿಂದ ದೇಶದ ಆರ್ಥಿಕ ವ್ಯವಸ್ಥೆಯೇ ನೆಲಕಚ್ಚಿದೆ. ಕೆಲಸ ಕಳೆದುಕೊಂಡ ಜನರು ತಮ್ಮೂರಿಗೆ ಬಂದು ವ್ಯವಸಾಯ ಆರಂಭಿಸಿದ್ದರು. ವರ್ಷಗಳಿಂದ ಖಾಲಿ ಬಿಟ್ಟಿದ್ದ ಜಮೀನಿನಲ್ಲಿ ರಾಗಿ ಬಿತ್ತನೆ ಮಾಡಿದ್ದರು. ಕೃಷಿಗೆ ಕಾಲಿಟ್ಟವರ ನಿರೀಕ್ಷೆ ಹುಸಿ ಮಾಡದೆ ಈ ಬಾರಿ ಉತ್ತಮ ಮಳೆ ಸಹ ಆಗಿತ್ತು. ಕಾಲ ಕಾಲಕ್ಕೆ ಸುರಿದ ಮಳೆಯಿಂದ ತೆನೆ ತುಂಬಿದ ರಾಗಿ ಹೊಲಗಳು ಬಂಪರ್ ಬೆಳೆಯ ನಿರೀಕ್ಷೆ ಹುಟ್ಟು ಹಾಕಿತ್ತು. ಈಗಾಗಲೇ ರಾಗಿ ಕೊಯ್ಲು ಕೆಲಸ ಸಹ ಶುರುವಾಗಿದೆ. ಆದರೆ ಇದೇ ಸಮಯಕ್ಕೆ ಮಳೆರಾಯನ ಆಗಮನದಿಂದ, ರಾಗಿ ಫಸಲು ಹೊಲದಲ್ಲಿ ಮಕಾಡೆ ಮಲಗಿದೆ.
ಜಿಲ್ಲೆಯ ಬಹುತೇಕ ಜಮೀನಿನಲ್ಲಿ ಈ ವರ್ಷ ರಾಗಿಯನ್ನು ಬೆಳೆಯಲಾಗಿದೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ 10,286, ನೆಲಮಂಗಲ 11,742, ದೇವನಹಳ್ಳಿ-10,484 ಮತ್ತು ಹೊಸಕೋಟೆ 8,524 ಹೆಕ್ಟೇರ್ ಸೇರಿದಂತೆ ಒಟ್ಟು ಜಿಲ್ಲೆಯ 41,036 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದೆ.
ಇಂದು ಕೊಯ್ಲು ಮಾಡಲು ಒಬ್ಬ ಕಾರ್ಮಿಕನಿಗೆ 500 ರೂ. ಕೊಡ ಬೇಕು, ನೆಲ ಕಚ್ಚಿರುವ ಹೊಲ ಕೊಯ್ಲು ಮಾಡಲು ಕಷ್ಟ ಇರುವುದರಿಂದ ಹೆಚ್ಚಿನ ಕೂಲಿ ಕೇಳುತ್ತಾರೆ. ಮಳೆ ಹೀಗೆಯೇ ಮುಂದುವರೆದರೆ ರಾಗಿ ಫಸಲು ಹೊಲದಲ್ಲಿಯೇ ಮೊಳಕೆ ಒಡೆಯುತ್ತದೆ. ಅದು ಕಪ್ಪು ಬಣ್ಣಕ್ಕೆ ತಿರುಗಿ, ಮಾರುಕಟ್ಟೆಯಲ್ಲಿ ಬೆಲೆಯಿಲ್ಲದಂತಾಗುತ್ತದೆ.
ಒಂದು ಎಕರೆ ರಾಗಿ ಬೆಳೆಯಲು 25 ರಿಂದ 30 ಸಾವಿರ ಹಣ ಖರ್ಚಾಗಿದೆ, ಒಂದು ಎಕರೆಗೆ 15ರಿಂದ 20 ಕ್ವಿಂಟಾಲ್ ರಾಗಿ ಫಸಲು ಬರುತ್ತದೆ. ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್ಗೆ ಮೂರು ಸಾವಿರ ರೂ. ಬೆಲೆ ಇದೆ. ಆದರೆ ಈಗ ಸುರಿಯುತ್ತಿರುವ ಮಳೆಯಿಂದ ರಾಗಿ ಫಸಲಿನ ಮೇಲಿನ ಪರಿಣಾಮ ಬೀರಲಿದೆ. ಇದರಿಂದ ಇಳುವರಿ ಸಹ ಕಡಿಮೆಯಾಗಿ ಹಾಕಿದ ಬಂಡವಾಳ ಸಹ ಹುಟ್ಟುವುದಿಲ್ಲವೆಂದು ರೈತ ಕಂಗಲಾಗಿದ್ದಾನೆ.