ದೊಡ್ಡಬಳ್ಳಾಪುರ: ಅಮುಲ್ ಕಂಪೆನಿಯೊಂದಿಗೆ ನಂದಿನಿ ಕಂಪೆನಿಯನ್ನು ವಿಲೀನ ಸಂಬಂಧ ಕೇಂದ್ರ ಗೃಹ ಸಚಿವ ಆಮಿತ್ ಶಾ ಹೇಳಿಕೆ ವಿರೋಧಿಸಿರುವ ಶಾಸಕ ಟಿ.ವೆಂಕಟರಮಣಯ್ಯ, ಇದೊಂದು ದುರದೃಷ್ಟಕರ ಬೆಳವಣಿಗೆ ಎಂದಿದ್ದಾರೆ.
ಕರ್ನಾಟಕ ಪ್ರವಾಸದಲ್ಲಿದ್ದ ಅಮಿತ್ ಶಾ ಮಂಡ್ಯ ಅವರು ಜಿಲ್ಲಾ ಒಕ್ಕೂಟದ (ಮನ್ ಮುಲ್) ನ ಮೆಗಾ ಡೇರಿ ಉದ್ಘಾಟನೆಯ ಸಮಯದಲ್ಲಿ ಗುಜರಾತ್‌ನ ಅಮುಲ್ ಕಂಪೆನಿಯ ಜೊತೆ ನಂದಿನಿಯನ್ನು ವಿಲೀನ ಮಾಡುವುದಾಗಿ ಹೇಳಿದ್ದರು.
ಹೈನುಗಾರಿಕೆಯಲ್ಲಿ ನಮ್ಮ ರಾಜ್ಯ ಎರಡನೇ ಸ್ಥಾನದಲ್ಲಿದೆ. ಒಂದು ದಿನಕ್ಕೆ 94 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿರುವ ಕೆಎಂಎಫ್ ತಿಂಗಳ ಅಂತ್ಯದಲ್ಲಿ ಹಾಲು ಉತ್ಪಾದಕರಿಗೆ ಹಣ ಪಾವತಿ ಮಾಡುತ್ತಿದೆ. ನಂದಿನಿ ಉತ್ಪನ್ನಗಳು ಕರ್ನಾಟಕದ ಸ್ವಾಯತ್ತತೆ ಹೊಂದಿವೆ. ನಂದಿನಿ ಬ್ರ್ಯಾಂಡ್ ಕರ್ನಾಟಕದಲ್ಲೇ ಉಳಿಯುವುದರಿಂದ ಕೆಎಂಎಫ್ ಮತ್ತಷ್ಟು ಅಭಿವೃದ್ಧಿಯಾಗುತ್ತದೆ. ಹಾಗಾಗಿ, ಅಮುಲ್ ಜೊತೆ ನಂದಿನಿ ವಿಲೀನ ದುರದೃಷ್ಟಕರ ಎಂದರು.
ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು: ಇದೇ ವೇಳೆ, ರಾಜ್ಯಕ್ಕೆ ಅಮಿತ್ ಶಾ ಭೇಟಿ ಬಿಜೆಪಿ ಪಕ್ಷಕ್ಕೆ ಆನೆ ಬಲ ಬಂದಿದೆ ಎಂಬ ರಾಜ್ಯ ಬಿಜೆಪಿ ನಾಯಕರ ಹೇಳಿಕೆಗೆ ವೆಂಕಟರಮಣಯ್ಯ ತಿರುಗೇಟು ನೀಡಿದ್ದಾರೆ. ಅಮಿತ್ ಶಾ ಅವರಿಂದ ಹಿಮಾಲಯ ಪ್ರದೇಶದ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ಆನೆ ಬಲ ಬಂದಿಲ್ಲ ಯಾಕೆ? ಎಂದು ಕೇಳಿದ್ದಾರೆ.
ಕರ್ನಾಟಕದಲ್ಲಿ 2 ದಿನ ಪ್ರವಾಸ ಕೈಗೊಂಡಿದ್ದ ಸಚಿವ ಅಮಿತ್ ಶಾ ಅವರು ಮಂಡ್ಯದಲ್ಲಿನ ಹಾಲು ಒಕ್ಕೂಟದ ಆವರಣದಲ್ಲಿ 2,250 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮೆಗಾ ಡೈರಿಯನ್ನು ಉದ್ಘಾಟಿಸಿದ್ದರು. ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ಗುಜರಾತ್ ಮತ್ತು ಕರ್ನಾಟಕದ ಹಾಲು ಒಕ್ಕೂಟಗಳನ್ನು ವಿಲೀನಗೊಳಿಸುವ ಬಗ್ಗೆ ಪ್ರಸ್ತಾಪಿಸಿದ್ದರು.
ಇದನ್ನೂ ಓದಿ: ಈ ದುಷ್ಟ ಭಸ್ಮಾಸುರನ ಕೈಗೆ ಈಗಲೇ ಬರೆ ಹಾಕದಿದ್ದರೆ ರೈತರು ಬೀದಿಪಾಲು: ಸಿದ್ದರಾಮಯ್ಯ