ಆನೇಕಲ್: ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಕೆಲವೊಂದು ಆಸ್ಪತ್ರೆಗಳಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಲಭ್ಯವಾಗದೇ ಅನೇಕರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ಸಹ ಇಂತಹ ಸ್ಥಿತಿ ನಿರ್ಮಾಣಗೊಂಡಿದ್ದು, ಜ್ವರದಿಂದ ಬಳಲುತ್ತಿದ್ದ ಯುವಕನೋರ್ವನನ್ನ ಕಳೆದ ಒಂದು ವಾರದ ಹಿಂದೆ ಇಲ್ಲಿನ ಆಕ್ಸ್ಫರ್ಡ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆತನನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡಾಗಿನಿಂದಲೂ ತಾಯಿಗೆ ಮಗನ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ.
ಹೀಗಾಗಿ ಕಳೆದೊಂದು ವಾರದಿಂದ ಮಗನಿಗಾಗಿ ಆಸ್ಪತ್ರೆ ಎದುರು ಕಣ್ಣೀರಿಡುತ್ತಾ ತಾಯಿ ಕಾಲ ಕಳೆಯುತ್ತಿದ್ದಳು. ಇದರ ಮಧ್ಯೆ ನಿನ್ನೆ ವಿಡಿಯೋ ಹರಿಬಿಟ್ಟಿದ್ದ ಮಗ ನನ್ನನ್ನು ಇಲ್ಲಿ ಸಾಯಿಸುತ್ತಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಹೋಗಿ ಎಂದು ಹೇಳಿಕೊಂಡಿದ್ದನು. ಇದರ ಮಧ್ಯೆ ಆತ ಸಾವನ್ನಪ್ಪಿದ್ದಾನೆಂದು ಇಂದು ಆಸ್ಪತ್ರೆ ಮಾಹಿತಿ ನೀಡಿದೆ.
ತಾಯಿ - ಮಗನ ಬೇರೆ ಮಾಡಿದ ಆಕ್ಸ್ಫರ್ಡ್ ಆಸ್ಪತ್ರೆ ನಿರ್ಲಕ್ಷ್ಯದ ವಿರುದ್ಧ ಇದೀಗ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಇದರ ಮಧ್ಯೆ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಮಗನ ಕಳೆದುಕೊಂಡಿರುವ ತಾಯಿ ಆಕ್ರಂದನ ಮುಗಿಲು ಮುಟ್ಟಿದೆ. ಆತ ಬಿಬಿಎ ವ್ಯಾಸಂಗ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.