ನೆಲಮಂಗಲ: ಮಾದನಾಯಕನಹಳ್ಳಿ ಪುರಸಭೆಗೆ ಆಲೂರು ಗ್ರಾಮ ಪಂಚಾಯಿತಿ ಸೇರಿಸುವಂತೆ ಆಗ್ರಹಿಸಿ ಆಲೂರು ಗ್ರಾಮ ಪಂಚಾಯತ್ ಅಭ್ಯರ್ಥಿಗಳು ಗ್ರಾಮ ಪಂಚಾಯತ್ ಚುನಾವಣೆಗೆ ಬಹಿಷ್ಕಾರ ಹಾಕಿದ್ದಾರೆ. ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ 85 ಆಕಾಂಕ್ಷಿಗಳು ನಾಮಪತ್ರ ಹಿಂಪಡೆದಿದ್ದಾರೆ.
ಯಲಹಂಕ ತಾಲೂಕು ದಾಸನಪುರ ಹೋಬಳಿಯ ಮಾದನಾಯಕನಹಳ್ಳಿ ಪುರಸಭೆಗೆ ಆಲೂರು ಗ್ರಾಮ ಪಂಚಾಯತ್ ಸೇರಿಸಬೇಕೆಂಬ ಬೇಡಿಕೆ ಸ್ಥಳೀಯರದ್ದು. 8 ತಿಂಗಳ ಹಿಂದೆ ದಾಸನಪುರ ಹೋಬಳಿಯ 3 ಗ್ರಾಮ ಪಂಚಾಯತ್ ಸೇರಿಸಿ ಮಾದನಾಯಕನಹಳ್ಳಿ ಪುರಸಭೆಯಾಗಿ ಮೇಲ್ದರ್ಜೇಗೆ ಏರಿಸಲಾಯಿತು.
ಒಂದು ತಿಂಗಳ ಹಿಂದೆಯಷ್ಟೇ ಮತ್ತೆ ಮೂರು ಗ್ರಾಮ ಪಂಚಾಯತ್ಗಳನ್ನು ಒಗ್ಗೂಡಿಸಿ ಮಾದನಾಯಕನಹಳ್ಳಿ ನಗರಸಭೆಯಾಗಿ ಮೇಲ್ದರ್ಜೇಗೆ ಏರಿಸಿ ಗೆಜೆಟ್ನಲ್ಲಿ ನೋಟಿಫಿಕೇಷನ್ ಹೊರಡಿಸಲಾಯಿತು. ಈ ಸಮಯದಲ್ಲಿ ಆಲೂರು ಗ್ರಾಮ ಪಂಚಾಯತ್ ಸೇರಿಸಬೇಕೆಂಬ ಪಂಚಾಯತ್ನಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಯಿತು. ಆದರೆ ಆಡಳಿತ ಪ್ರಕ್ರಿಯೆ ವಿಳಂಬವಾಗಿದ್ದರಿಂದ ನಗರಸಭೆಗೆ ಸೇರ್ಪಡೆಯಾಗಿಲ್ಲ.
ಆಲೂರು ಗ್ರಾಮ ಪಂಚಾಯಿತಿಗೆ ಆಲೂರು, ಆಲೂರು ಪಾಳ್ಳ, ಹೆಗ್ಗಡದೇವನಪುರ, ಕುದುರೆಗೆರೆ, ಕುದುರೆಗೆರೆ ಕಾಲೋನಿ, ತಮ್ಮೇನಹಳ್ಳಿ ಗ್ರಾಮಗಳಿಗೆ ಸೇರಿದ 27 ಸ್ಥಾನಗಳಿಗೆ ಗ್ರಾಮ ಪಂಚಾಯತ್ ಚುನಾವಣೆ ನಡೆಯಬೇಕಿತ್ತು. ಆದರೆ ಆಲೂರು ಗ್ರಾಮ ಪಂಚಾಯತಿಯನ್ನ ಮಾದನಾಯಕನಹಳ್ಳಿ ಪುರಸಭೆಗೆ ಸೇರ್ಪಡಿಸಬೇಕೆಂದು ಆಗ್ರಹಿಸಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ 85 ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯುವ ಮೂಲಕ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.