ದೊಡ್ಡಬಳ್ಳಾಪುರ(ಬೆಂ.ಗ್ರಾ): ತಾಲೂಕಿನಲ್ಲಿ ಚರ್ಮಗಂಟು ರೋಗದಿಂದ ಜಾನುವಾರುಗಳು ಬಳಲುತ್ತಿದ್ದು, ರೋಗ ನಿವಾರಣೆಗಾಗಿ ರೈತರು ದೇವರ ಮೊರೆ ಹೋಗಿದ್ದಾರೆ. ತಾಲೂಕಿನ ಗುಂಡುಮಗೆರೆ ಗ್ರಾಮದ ರೈತರು ದೇವರಿಗೆ ಬೇವಿನ ಸೊಪ್ಪು, ಹೋಳಿಗೆ, ಕಾಯಿ ಮತ್ತು ಹಣ್ಣು ಇಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜಾನುವಾರುಗಳಿಗೆ ಕಾಡುತ್ತಿರುವ ರೋಗ ಆದಷ್ಟು ಬೇಗ ನಿವಾರಣೆಯಾಗುವಂತೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಗ್ರಾಮದಲ್ಲಿ ದಶಕಗಳಿಂದ ಈ ಸಂಪ್ರದಾಯ ವಾಡಿಕೆಯಲ್ಲಿದೆ. ಇಲ್ಲಿನ ಜನ ಜಾನುವಾರುಗಳಿಗೆ ಏನಾದರೂ ರೋಗಗಳು ಬಂದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಎಡೆ ಇಟ್ಟು, ಊರಿನ ಹೊರಗೆ ಇಟ್ಟು ಬರುತ್ತಾರೆ. ಇದರಿಂದ ರೋಗ ನಮ್ಮ ಗ್ರಾಮದಿಂದ ಹೊರ ಹೋಗಲಿದೆ ಎನ್ನುವ ನಂಬಿಕೆ ಇವರದ್ದು.