ನೆಲಮಂಗಲ : ಒಂದು ವರ್ಷದ ಹಿಂದೆ ಹೂಳು ತುಂಬಿದ್ದ ಕೆರೆಯಲ್ಲಿ ಇದೀಗ ಮಳೆಯಿಂದಾಗಿ ಅರ್ಧದಷ್ಟು ನೀರು ತುಂಬಿದೆ.
ಹಲವು ವರ್ಷಗಳಿಂದ ಹೂಳು ತುಂಬಿ ಕೆರೆ ಅವನತಿಯತ್ತ ಸಾಗಿತ್ತು. ಆದರೆ, ಇತ್ತೀಚೆಗೆ ಸುರಿದ ಮಳೆಯಿಂದ ಕೆರೆಗೆ ನೀರು ಬಂದಿರೋದ್ರಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಒಂದು ವರ್ಷದ ಹಿಂದೆ ಅಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡ ಹಾಗೂ ತಾಲೂಕು ದಂಡಾಧಿಕಾರಿ ರಾಜಶೇಖರ್ ನೇತೃತ್ವದಲ್ಲಿ ಬರದಿ ಗ್ರಾಮದ ಕೆರೆಯ ಹೂಳು ತೆಗೆಯುವ ಕಾಮಾಗಾರಿಗೆ ಚಾಲನೆ ನೀಡಲಾಗಿತ್ತು. ಗ್ರಾಮಸ್ಥರ ಸಹಕಾರ ಮತ್ತು ಟಿ.ಬೇಗೂರಿನ ಬಳಿಯಿರುವ ಪೆಪ್ಸಿ ಕಂಪನಿಯ ಸಹಯೋಗದೊಂದಿಗೆ ಕೆರೆಯ ಹೂಳು ತೆಗೆಯಲಾಗಿತ್ತು.
ಕೆರೆಯ ಹೂಳು ತೆಗೆಯಲು ಪೆಪ್ಸಿ ಕಂಪನಿ ಸಿಎಸ್ಆರ್ ಫಂಡ್ನ ಯೋಜನೆಯಡಿ 75 ಲಕ್ಷ ಹಣ ಕೊಟ್ಟಿತ್ತು. ಸುಮಾರು 46 ಹೆಕ್ಟೇರ್ ವಿಸ್ತೀರ್ಣವುಳ್ಳ ಬರದಿ ಕೆರೆಯಲ್ಲಿ 3 ಅಡಿ ಆಳದಷ್ಟು ಹೂಳನ್ನು ತೆಗೆಯಲಾಗಿತ್ತು.
ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕೆರೆಯು ಈಗಾಗಲೇ ಅರ್ಧಭಾಗ ತುಂಬಿದೆ. ಮುಂದಿನ ಮಳೆಗೆ ಕೆರೆ ಸಂಪೂರ್ಣ ತುಂಬುವ ನಿರೀಕ್ಷೆ ಇದೆ. ಸುಮಾರು ಎರಡು ವರ್ಷಗಳ ಕಾಲ ಕೆರೆಯ ಅಕ್ಕಪಕ್ಕದ ರೈತರ ಬೋರ್ವೆಲ್ಗಳಿಗೆ ಯಾವುದೇ ನೀರಿನ ತೊಂದರೆ ಆಗುವುದಿಲ್ಲ ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.