ದೊಡ್ಡಬಳ್ಳಾಪುರ: ಮರಾಠ ಅಭಿವೃದ್ಧಿ ನಿಗಮಕ್ಕೆ ಆದೇಶ ನೀಡಿದ ಬಿಜೆಪಿ ಸರ್ಕಾರದ ವಿರುದ್ಧ ಕನ್ನಡ ಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಅವರ ಹೋರಾಟವನ್ನ ಅವಹೇಳನ ಮಾಡುತ್ತಿರುವ ಬಿಜೆಪಿ ವಿರುದ್ಧ ಮಾಜಿ ಸಚಿವ ಕೃಷ್ಣಬೈರೇಗೌಡ ವಾಗ್ದಾಳಿ ನಡೆಸಿದರು.
ದೊಡ್ಡಬಳ್ಳಾಪುರ ತಾಲೂಕಿನ ಸೊಣ್ಣಪ್ಪನಹಳ್ಳಿ ಗೇಟ್, ಅಭಯ ಅಂಜನೇಯಸ್ವಾಮಿ ನೂತನ ದೇವಾಲಯ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿ ಮಾತನಾಡಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಸಿದ್ದರಾಮಯ್ಯನವರು ಕನ್ನಡ ಬಾವುಟಕ್ಕೆ ಮಾನ್ಯತೆ ನೀಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಆದರೆ 5 ವರ್ಷವಾದರು ಕನ್ನಡ ಬಾವುಟಕ್ಕೆ ಮಾನ್ಯತೆ ನೀಡುವ ಕೆಲಸ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿಲ್ಲ.
ಹಿಂದಿನಿಂದಲೂ ಕನ್ನಡ ಬಾವುಟ ಹಾರಿಸುಕೊಂಡು ಬಂದಿದ್ದೇವೆ. ಆದರೆ ಹೈಕೋರ್ಟ್ ಕನ್ನಡ ಬಾವುಟಕ್ಕೆ ಮಾನ್ಯತೆ ನೀಡಿಲ್ಲ. ಆದರಿಂದ ನಾವು ಕನ್ನಡಿಗರು ಬಾವುಟಕ್ಕೆ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಕಳುಹಿಸಿದ್ದೇವೆ. ಆದರೆ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಬಲವಂತದಿಂದ ಹಿಂದಿ ಭಾಷೆ ಹೇರುವ ಮೂಲಕ ಕನ್ನಡ ವಿರೋಧಿಯಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವರ್ಷಕ್ಕೆ 5 ಕೋಟಿ ಅನುದಾನ ಸಹ ನೀಡಿಲ್ಲ. ಆದರೆ ಮರಾಠ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ರೂ. ಹಣ ನೀಡುವುದಾಗಿ ಹೇಳಿದೆ. ಯತ್ನಾಳ್ ಬಾಯಿಗೆ ಬಂದಂತೆ ಮಾತನಾಡುತ್ತಾರೆ, ಅದಕ್ಕೆ ರಿಯಾಕ್ಷನ್ ಕೊಟ್ಟು ಅವರನ್ನು ದೊಡ್ಡವರು ಮಾಡುವ ಅಗತ್ಯ ನನಗಿಲ್ಲ. ಒಂದು ದಿನ ಪ್ರಾಧಿಕಾರ ಅಂತಾರೆ, ಒಂದು ದಿನ ನಿಗಮ ಅಂತಾರೆ. ರಾಜಕೀಯ ಲಾಭಕ್ಕಾಗಿ ಸರ್ಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ದುರಂತ ಎಂದರು.