ದೊಡ್ಡಬಳ್ಳಾಪುರ: ತಾಯಿ ಮನೆಯ ಆಸ್ತಿಗಾಗಿ, ಯುವತಿಯೊಬ್ಬಳು ಸೋದರ ಮಾವನನ್ನು ಕಿಡ್ನಾಪ್ ಮಾಡಿಸಿದ ಘಟನೆ ತಾಲೂಕಿನಲ್ಲಿ ನಡೆದಿದ್ದು, ಅಪಹರಣಕಾರರ ಬೆನ್ನತ್ತಿದ ಪೊಲೀಸರಿಗೆ ಆರೋಪಿಗಳು ಹಲ್ಲೆ ನಡೆಸಲು ಮುಂದಾದಾಗ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ಹಿನ್ನೆಲೆ : ಬೆಂಗಳೂರು ಉತ್ತರ ತಾಲೂಕಿನ ಹನಿಯೂರು ಗ್ರಾಮದ ನಿವಾಸಿ ಅಂಜನ್ ಗೌಡ (50) ಅಪಹರಣಕ್ಕೊಳಗಾದ ವ್ಯಕ್ತಿ. ಇವರ ಅಕ್ಕನ ಮಗಳು ಮೌನ, ಪ್ರೀತಿಸಿದ ಹುಡುಗನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಳು. ಆ ಬಳಿಕ ತನ್ನ ತಾಯಿಯ ತವರು ಮನೆಯ ಆಸ್ತಿಯಲ್ಲಿ ತನಗೆ ಪಾಲು ಬೇಕೆಂದು ಸೋದರ ಮಾವ ಅಂಜನ್ ಗೌಡ ಬಳಿ ಕೇಳಿದ್ದಳು. ಆದರೆ, ಅಂಜನಗೌಡ ಅಕ್ಕನ ಮಗಳಿಗೆ ಆಸ್ತಿ ಕೊಡಲು ನಿರಾಕರಿಸಿದ್ದರು. ಆಸ್ತಿ ಕೊಡಲು ಅಡ್ಡಿಪಡಿಸುತ್ತಿರುವ ಸೋದರ ಮಾವ ಅಂಜನಗೌಡರಿಗೆ ಬೆದರಿಕೆ ಹಾಕಿ, ಆಸ್ತಿ ಹೊಡೆಯಲು ಮೌನ ಸಂಚು ನಡೆಸಿದ್ದಳು. ಇದಕ್ಕಾಗಿ, ಮನೋಜ್ ಎಂಬಾತ ಮತ್ತು ಆತನ ಸ್ನೇಹಿತರ ಗ್ಯಾಂಗ್ನಿಂದ ಅಂಜನ ಗೌಡರನ್ನು ಅಪಹರಣ ಮಾಡಿಸಿದ್ದಳು. ತನ್ನ ಅಪ್ಪ ಅಪಹರಣವಾಗಿರುವ ಬಗ್ಗೆ ಅಂಜನ ಗೌಡರ ಪುತ್ರಿ ಪ್ರತಿಭಾ, ಅಕ್ಟೋಬರ್ 22 ರಂದು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು.
ದೂರು ದಾಖಲಿಸಿಕೊಂಡ ಪೊಲೀಸರು, ಅಂಜನಗೌಡರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ರವಿ ಡಿ ಚನ್ನಣ್ಣನವರ್, ಅಡಿಷನಲ್ ಎಸ್ಪಿ ಲಕ್ಷ್ಮಿ ಗಣೇಶ್ ಹಾಗೂ ಡಿವೈಎಸ್ಪಿ ರಂಗಪ್ಪ ಮಾರ್ಗದರ್ಶನದಲ್ಲಿ, ಸಿಪಿಐ ದೊಡ್ಡಬಳ್ಳಾಪುರ ನವೀನ್ ಕುಮಾರ್ ನೇತೃತ್ವದ ತಂಡ ರಚನೆ ಮಾಡಿದ್ದರು. ತಂಡದಲ್ಲಿ ಮಹಿಳಾ ಠಾಣೆ ಪೊಲೀಸ್ ಇನ್ಸ್ಪೆಪೆಕ್ಟರ್ ಕುಮಾರ್ ರಾಜಾನುಕುಂಟೆ, ಪೊಲೀಸ್ ಇನ್ಸ್ಪೆಕ್ಟರ್ ಶಂಕರಪ್ಪ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಸಬ್ಇನ್ಸ್ಪೆಕ್ಟರ್ ರಂಗಶಾಮಯ್ಯ ಮತ್ತು ಪೊಲೀಸ್ ಸಿಬ್ಬಂದಿ ಇದ್ದರು.
ಪೊಲೀಸರ ತಂಡ ಅಪಹರಣಕಾರರ ಬೆನ್ನತ್ತಿದಾಗ, ಆರೋಪಿಗಳು ರಾಜನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾವಳ್ಳಿಪುರದ ನಿರ್ಜನ ಪ್ರದೇಶದಲ್ಲಿ ಅಂಜನ ಗೌಡರನ್ನು ಇನ್ನೋವಾ ಕಾರಿನಲ್ಲಿ ಒತ್ತೆಯಾಳಾಗಿಟ್ಟುಕೊಂಡಿರುವ ಮಾಹಿತಿ ಸಿಕ್ಕಿತ್ತು. ಇಂದು ( ಅಕ್ಟೋಬರ್ 23) ಮುಂಜಾನೆ ಮಹಿಳಾ ಠಾಣೆ ಇನ್ಸ್ಪೆಕ್ಟರ್ ಕುಮಾರ್ ಮತ್ತು ರಾಜಾನುಕುಂಟೆ ಪಿಎಸ್ಐ ಶಂಕರಪ್ಪ ತಮ್ಮ ತಂಡದೊಂದಿಗೆ ಮಾವಳ್ಳಿಪುರದ ನಿರ್ಜನ ಪ್ರದೇಶಕ್ಕೆ ತೆರಳಿ, ಅಪಹರಣಕ್ಕೊಳಗಾಗಿದ್ದ ಅಂಜನಗೌಡರನ್ನು ರಕ್ಷಣೆ ಮಾಡಿದ್ದಾರೆ.
ಕಾರ್ಯಾಚರಣೆಗೆ ಹೋಗಿದ್ದ ಪೊಲೀಸರನ್ನು ನೋಡಿದ ಮೂವರು ಆರೋಪಿಗಳು, ಸ್ಥಳದಿಂದ ಪರಾರಿಯಾಗಿದ್ದಾರೆ. ಅಪಹರಣ ಪ್ರಕರಣದ ಪ್ರಮುಖ ಆರೋಪಿ ಮನೋಜ್ ಕುಮಾರ್ನನ್ನು ಪಿಎಸ್ಐ ಶಂಕರಪ್ಪ ಬಂಧಿಸಲು ತೆರಳಿದಾಗ, ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ, ಆತ್ಮರಕ್ಷಣೆಗಾಗಿ ಇನ್ಸ್ಪೆಕ್ಟರ್ ಕುಮಾರ್ ತಮ್ಮ ಸರ್ವಿಸ್ ರಿವಾಲ್ವರ್ನಿಂದ ಗಾಳಿಯಲ್ಲಿ ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೂ, ಆತ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ. ಈ ವೇಳೆ, ಕಾಲಿಗೆ ಗುಂಡು ಹಾರಿಸಿ ಬಂಧಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಪಿಎಸ್ಐ ಶಂಕರ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಹರಣಕ್ಕೆ ಕುಮ್ಮಕ್ಕು ಕೊಟ್ಟ ಆರೋಪಿ ಮೌನಾಳನ್ನು ಪೊಲೀಸರು ಬಂಧಿಸಿದ್ದಾರೆ.