ನೆಲಮಂಗಲ: ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಹಿರಿಯ ನಟಿ ಡಾ. ಲೀಲಾವತಿ ಬೆಂಬಲ ಸೂಚಿಸಿದ್ದು, ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನೆಲಮಂಗಲ ತಾಲೂಕಿನ ಸೊಲದೇವನಹಳ್ಳಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮೂರು ನೂತನ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೆ ತಂದಿದೆ. ಈ ಕಾಯ್ದೆಗಳ ವಿರುದ್ಧ ಪಂಜಾಬ್ ಸೇರಿದಂತೆ ಇತರೆ ರಾಜ್ಯಗಳ ರೈತರು ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ನಿನ್ನೆ ಕಾಯ್ದೆ ವಿರುದ್ಧ ರೈತರು ಭಾರತ್ ಬಂದ್ ಮಾಡಿ, ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಕೂಡಲೇ ರೈತರ ಹೋರಾಟಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಸೊಲದೇವನಹಳ್ಳಿಯಲ್ಲಿ ಮಗ ವಿನೋದ್ ರಾಜ್ ಕುಮಾರ್ ಜೊತೆ ಕೃಷಿ ಜೀವನ ನಡೆಸುತ್ತಿರುವ ಲೀಲಾವತಿಯವರು, ನನಗೆ ಸಿನಿಮಾಗಿಂತ ರೈತಾಪಿ ಜೀವನವೇ ಹಿತ ಅನಿಸಿದೆ. ರೈತ ಕೆಸರಿನಲ್ಲಿ ಎತ್ತುಗಳಂತೆ ಕಷ್ಟುಪಟ್ಟು ದುಡಿಯುತ್ತಾರೆ. ಹೀಗೆ ಕಷ್ಟದಲ್ಲಿರುವ ರೈತರನ್ನು ವಿರೋಧಿಸಿ ಕಾಯ್ದೆ ಜಾರಿಗೆ ತಂದು, ಆತನ ಮನಸ್ಸನ್ನು ನೋಯಿಸಬಾರದು. ರೈತರಿಗೆ ಒಗ್ಗಟ್ಟಿನಿಂದ ಎಲ್ಲರೂ ಸಹಾಯ ಮಾಡಿ, ವಿರೋಧಕ್ಕಿಂತಲೂ ಸಮಾಧಾನ ಒಳ್ಳೆಯದು, ಇದನ್ನು ಅರ್ಥ ಮಾಡಿಕೊಳ್ಳಿ ಎಂದು ಲೀಲಾವತಿ ಹೇಳಿದರು.
ದೇಶದ ಬೆನ್ನೆಲುಬು ರೈತ ಎನ್ನುತ್ತೀರಾ. ಬೆನ್ನೆಲುಬನ್ನೇ ಮುರಿದು, ರೈತ ದೇಶದ ಬೆನ್ನೆಲುಬು ಅಂದ್ರೆ ಹೇಗಾಗುತ್ತದೆ?. ಒಬ್ಬ ರೈತ ಮಹಿಳೆಯಾಗಿ ನಾನು ಇದನ್ನು ಬೆಂಬಲಿಸುತ್ತೇನೆ. ಎಲ್ಲರು ಸಹ ರೈತರ ಹೋರಾಟವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಇದನ್ನೂ ಓದಿ: ಇಂದು ರೈತರಿಂದ ಬಾರುಕೋಲು ಚಳವಳಿ: ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್