ದೇವನಹಳ್ಳಿ/ಬೆಂಗಳೂರು ಗ್ರಾಮಾಂತರ: ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮಾರಕ ವೈರಸ್ ರಾಜ್ಯಕ್ಕೆ ಲಗ್ಗೆ ಇಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪರಿಶೀಲನೆ ನಡೆಸಿದರು.
ಅಧಿಕಾರಿಗಳ ಜೊತೆಗೆ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ ಸಚಿವರು, ವಿದೇಶದಿಂದ ಆಗಮಿಸುವ ಪ್ರಯಾಣಿಕರನ್ನು ತಪಾಸಣೆ ಮಾಡುವ ಬಗ್ಗೆ ಮಾಹಿತಿ ಪಡೆದುಕೊಂಡರು. ಚೀನಾದಲ್ಲಿ ಕರೊನಾ ವೈರಸ್ ಕಂಡು ಬಂದ ದಿನದಿಂದಲೂ ಕೆಐಎಎಲ್‌ನಲ್ಲಿ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿತ್ತು.
ಬಳಿಕ ಸಚಿವ ಸುಧಾಕರ್ ಮಾತನಾಡಿ, ರಾಜ್ಯದಲ್ಲಿ ಈವರೆಗೆ ಒಂದು ಅನುಮಾನಾಸ್ಪದ ಪ್ರಕರಣ ಪತ್ತೆಯಾಗಿತ್ತು. ತಪಾಸಣೆಯ ಬಳಿಕ ಅದು ನೆಗೆಟಿವ್ ಎಂದು ಗೊತ್ತಾಗಿದೆ. ರಾಜ್ಯದಲ್ಲಿ ಇದುವರೆಗೆ ಯಾರಿಗೂ ಈ ಸೋಂಕು ತಗುಲಿಲ್ಲ ಎಂದು ಸ್ಪಷ್ಟಪಡಿಸಿದರು.
ಏರ್ಪೋರ್ಟ್ ಮೂಲಕ ವಿದೇಶಿಗರು ಬರುವುದರಿಂದ ಅಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಬೇಕಿದೆ. ದಕ್ಷಿಣ ಕೊರಿಯಾ, ಚೀನಾದಿಂದ ಬರುವ ಪ್ರಯಾಣಿಕರು ಹಾಗೂ ಪ್ರವಾಸ ತೆರಳಿ ಮರಳುತ್ತಿರುವ ಸ್ವದೇಶಿಗರ ಮೇಲೂ ಹೆಚ್ಚಿನ ಗಮನ ಕೊಡಬೇಕಿದೆ. ಅನುಮಾನಾಸ್ಪದ ವ್ಯಕ್ತಿಗಳು ಪತ್ತೆಯಾದಲ್ಲಿ ಅಂತಹ ವ್ಯಕ್ತಿಗಳಿಗೆ ಸೂಕ್ತ ಚಿಕಿತ್ಸೆ ಕೊಡುವ ಕೆಲಸ ಮಾಡಲಿದ್ದೇವೆ. ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ಚಿಕಿತ್ಸಾ ಕೇಂದ್ರ ಆರಂಭಿಸಬೇಕಿದ್ದು, ಅದಕ್ಕಾಗಿ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ಮಾಡಿರುವುದಾಗಿ ತಿಳಿಸಿದರು.