ದೊಡ್ಡಬಳ್ಳಾಪುರ: ಎರಡು ದಿನಗಳಿಂದ ರಾಜಕಾರಣಿ ಆರ್ ಎಲ್ ಜಾಲಪ್ಪ ಅವರ ಪುತ್ರನ ಆದಾಯ ಮೂಲಗಳನ್ನು ಜಾಲಾಡಿದ ಐಟಿ ಅಧಿಕಾರಿಗಳು ಒಂದು ಸೂಟ್‌ಕೇಸ್ ಮತ್ತು ಕವರ್‌ನಲ್ಲಿ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆ ನಿವಾಸಿಯಾಗಿರುವ ಕೇಂದ್ರದ ಮಾಜಿ ಸಚಿವ ಆರ್ ಎಲ್ ಜಾಲಪ್ಪನವರ ಪುತ್ರ ಜೆ.ರಾಜೇಂದ್ರಕುಮಾರ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದರು. ಐಟಿ ದಾಳಿ ನಂತರ 'ಈಟಿವಿ ಭಾರತ್'ಗೆ ಪ್ರತಿಕ್ರಿಯೆ ನೀಡಿದ ರಾಜೇಂದ್ರ ಅವರು, ನಮಗೆ ಉತ್ತಮ ಸಹಕಾರ ನೀಡಿ ನಮ್ಮ ಜೊತೆ ಹಳೇ ಸಂಬಂಧಿಕರ ರೀತಿ ನಡೆದುಕೊಂಡರು. ಆದಾಯ ತೆರಿಗೆ ಬಗ್ಗೆ ಹಲವು ಮಾಹಿತಿ ನಮಗೂ ಮಾಹಿತಿ ನೀಡಿದರು ಎಂದಿದ್ದಾರೆ.
2000ರಿಂದ ಇತ್ತೀಚೆಗೆ ಆಸ್ತಿ ಖರೀದಿ ಮತ್ತು ಮಾರಾಟದ ಬಗೆಗಿನ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಈ ತಿಂಗಳ 14ರಂದು ಐಟಿ ಇಲಾಖೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ವಿಚಾರಣೆಗೆ ಹಾಜರಾಗುವುದಾಗಿ ಹೇಳಿದರು. ಇದು ಕಾಂಗ್ರೆಸ್ ನಾಯಕರ ಮೇಲಿನ ದುರುದ್ದೇಶದ ದಾಳಿ ಅಂತಾ ನಮಗೆ ಅನಿಸುತ್ತಿಲ್ಲ. ಎಲ್ಲಾ ಕಡೆ ಮೆಡಿಕಲ್ ಕಾಲೇಜಿನ ಬಗ್ಗೆ ದಾಳಿ ನಡೆಸಿದ್ದಾರೆ ಅಷ್ಟೇ.. ಇದಕ್ಕೆ ಯಾವುದೇ ರಾಜಕೀಯ ಬಣ್ಣ ಕಟ್ಟುವ ಅವಶ್ಯಕತೆಯಿಲ್ಲವೆಂದರು.