ನೆಲಮಂಗಲ : "ನೀನು ಎರಡನೇ ಮದುವೆಯಾಗಿದ್ದಿ, ನಾನೇಕೆ ಆಗಬಾರದು" ಎಂದು ಕ್ಯಾತೆ ತೆಗೆದ ಗಂಡನೊಬ್ಬ ಹೆಂಡತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಆಕೆಯ ಸಾವಿಗೆ ಕಾರಣವಾದ ಘಟನೆ ತಾಲೂಕಿನ ಯರಮಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಗಂಗಮ್ಮ ಎಂದು ಗುರುತಿಸಲಾಗಿದೆ. ಆಕೆಯ ಪತಿ ಸಿದ್ದರಾಜು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಏಳು ವರ್ಷದ ಹಿಂದೆ ಗಂಗಮ್ಮ ಹಾಸನ ಮೂಲದ ದೇವರಾಜು ಎಂಬಾತನನ್ನು ವಿವಾಹವಾಗಿದ್ದರು. ಬಳಿಕ, ಕೌಟುಂಬಿಕ ಕಲಹದಿಂದ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ ಗಂಗಮ್ಮ ಗಂಡನನ್ನು ತೊರೆದು ತವರು ಮನೆ ಸೇರಿದ್ದರು. ಈ ವೇಳೆ, ಆಕೆಗೆ ಬಾಳು ಕೊಡುವುದಾಗಿ ಬಂದವನೇ ಸೋದರ ಸಂಬಂಧಿ ಸಿದ್ದರಾಜು. ಗಂಗಮ್ಮಳನ್ನು ಮದುವೆಯಾದ ಬಳಿಕ ಸಿದ್ದರಾಜು ಕುಟುಂಬ ಬೆಂಗಳೂರಿನ ಯಲಹಂಕ ಬಳಿಯ ಜಕ್ಕೂರಿನಲ್ಲಿ ನೆಲೆಸಿತ್ತು. ಕಳೆದ ಮೂರು ವರ್ಷಗಳಿಂದ ಇವರಿಬ್ಬರ ದಾಂಪತ್ಯ ಜೀವನ ಚೆನ್ನಾಗಿಯೇ ಇತ್ತು. ಆದರೆ, ಇತ್ತೀಚೆಗೆ ಇಬ್ಬರ ನಡುವೆ ಕಂದಕ ಸೃಷ್ಟಿಯಾಗಿತ್ತು. ನೀನು ನನ್ನನ್ನು ಎರಡನೇ ಮದುವೆಯಾಗಿದ್ದೀಯಾ, ನಾನೇಕೆ ಇನ್ನೊಂದು ಹುಡುಗಿಯನ್ನು ಮದುವೆಯಾಗಬಾರದು ಎಂದು ಗಂಡ ಸಿದ್ದರಾಜು ಹೆಂಡತಿಯೊಂದಿಗೆ ಪದೇ ಪದೆ ಕ್ಯಾತೆ ತೆಗೆಯುತ್ತಿದ್ದನಂತೆ.
ಇತ್ತೀಚೆಗೆ ಯರಮಂಚನಹಳ್ಳಿ ಗ್ರಾಮದಲ್ಲಿ ಸಿದ್ದರಾಜುವಿನ ಅಜ್ಜಿ ಮರಣ ಹೊಂದಿದ್ದರು. ಅವರ ತಿಥಿ ಕಾರ್ಯಕ್ಕೆ ಗ್ರಾಮಕ್ಕೆ ಬಂದಿದ್ದ ದಂಪತಿ ಮರುದಿನ ಬೆಂಗಳೂರಿಗೆ ವಾಪಾಸ್ ಹೋಗೋಣ ಎಂದು ತೀರ್ಮಾನಿಸಿದ್ದರು. ಈ ನಡುವೆ ಬೈಕ್ಗೆ ಪೆಟ್ರೋಲ್ ಇಲ್ಲವೆಂದು ಸಿದ್ದರಾಜು ಪೆಟ್ರೋಲ್ ತಂದಿಟ್ಟಿದ್ದ. ಜೂನ್ 14 ರಂದು ಊಟ ಮಾಡುವ ವೇಳೆ ಗಂಡ ಹೆಂಡತಿ ಕ್ಷುಲ್ಲಕ ವಿಷಯಕ್ಕೆ ಜಗಳ ಶುರುವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿ ಬೈಕ್ಗಾಗಿ ತಂದಿಟ್ಟ ಪೆಟ್ರೋಲ್ನ್ನು ಹೆಂಡತಿ ಮೇಲೆ ಸುರಿದ ಬೆಂಕಿ ಹಚ್ಚಿದ್ದ. ತೀವ್ರವಾಗಿ ಗಾಯಗೊಂಡಿದ್ದ ಗಂಗಮ್ಮಳನ್ನು ಸ್ಥಳೀಯರು, ತಕ್ಷಣ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಗಂಗಮ್ಮ ನಿನ್ನೆ ಅಸುನೀಗಿದ್ದಾರೆ.
ಪ್ರಕರಣದ ತನಿಖೆಗಿಳಿದ ನೆಲಮಂಗಲ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಶಿವಣ್ಣ ನೇತೃತ್ವದ ತಂಡ ಆರೋಪಿ ಸಿದ್ದರಾಜುನನ್ನು ಬಂಧಿಸಿದ್ದಾರೆ. ಆರೋಪಿ ತನ್ನ ಕೃತ್ಯವನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಸದ್ಯ, ಸಿದ್ದರಾಜುನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.