ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರ ಮತ್ತು ನಾಗಾರಾಧನೆಯ ಕ್ಷೇತ್ರವಾಗಿರುವ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಆದಾಯದಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತವಾಗಿದೆ.
ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಜಾರಿಯಾದ ಲಾಕ್ಡೌನ್ ನಿಂದ ಮಾರ್ಚ್ 23 ರಿಂದ ದೇವಸ್ಥಾನದ ಬಾಗಿಲು ಬಂದ್ ಮಾಡಲಾಗಿತ್ತು. ಸರ್ಕಾರದ ಆದೇಶದಂತೆ ಜೂನ್ 8 ರಿಂದ ದೇವಸ್ಥಾನದಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ದೇವಸ್ಥಾನದ ಬಾಗಿಲು ಬಂದ್ ಮಾಡಿದ ಪರಿಣಾಮ ಪ್ರಮುಖ ಆದಾಯ ಮೂಲವಾಗಿದ್ದ ಹುಂಡಿ ಹಣದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಮೂರು ತಿಂಗಳ ನಂತರ ಇಂದು ದೇವಸ್ಥಾನದ ಹುಂಡಿ ಹಣವನ್ನು ಎಣಿಕೆ ಮಾಡಲಾಗಿದ್ದು, 24,01,244 ರೂಪಾಯಿ ಸಂಗ್ರಹವಾಗಿದೆ. 4 ಗ್ರಾಂ ಚಿನ್ನ ಸೇರಿದಂತೆ 2 ಕೆ.ಜಿ. 544 ಗ್ರಾಂ ಬೆಳ್ಳಿಯನ್ನು ಭಕ್ತರು ಹುಂಡಿಗೆ ಹಾಕಿದ್ದಾರೆ. ಇದರ ಜೊತೆಗೆ ಕೆನಡಾ, ಸಿಂಗಪುರ, ಆಸ್ಟ್ರೇಲಿಯಾ ನೋಟ್ ಗಳು ಸಿಕ್ಕಿವೆ . ಹಳೇ ನೋಟ್ ಗಳು ಸಹ ಎಣಿಕೆ ಮಾಡುವಾಗ ಸಿಕ್ಕಿವೆ.
ತಿಂಗಳಿಗೊಮ್ಮೆ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ಮಾಡಲಾಗುತ್ತದೆ. ತಿಂಗಳಲ್ಲಿ ಸರಾಸರಿ 50 ಲಕ್ಷ ಹುಂಡಿ ಹಣ ಸಂಗ್ರಹವಾಗುತ್ತಿತ್ತು. ಕಳೆದ ಫೆಬ್ರವರಿಯಲ್ಲಿ ನಡೆದ ಹುಂಡಿ ಹಣ ಎಣಿಕೆಯಲ್ಲಿ 46,24,326 ರೂಪಾಯಿ ಸಂಗ್ರಹವಾಗಿತ್ತು. ಭಕ್ತರು ಕಾಣಿಕೆಯಾಗಿ ಹುಂಡಿಗೆ ಹಾಕುವ ಪ್ರತಿ ತಿಂಗಳು ಹೆಚ್ಚುತ್ತಲೇ ಇತ್ತು. ಈ ಹುಂಡಿ ಹಣದಿಂದ ದೇವಸ್ಥಾನದ ಸಿಬ್ಬಂದಿಗೆ ಸಂಬಳ ಮತ್ತು ಅಭಿವೃದ್ಧಿ ಕಾರ್ಯ ನಡೆಯುತ್ತಿತ್ತು. ಆದರೀಗ ಮೂರು ತಿಂಗಳ ನಂತರ ನಡೆದ ಹುಂಡಿ ಹಣ ಎಣಿಕೆ ಯಲ್ಲಿ ಅತ್ಯಂತ ಕಡಿಮೆ ಹಣ ಸಂಗ್ರಹವಾಗಿದೆ. ಇದರಿಂದ ದೇವಸ್ಥಾನದ ಅಭಿವೃದ್ಧಿ ಕಾರ್ಯ ಮತ್ತು ಸಿಬ್ಬಂದಿ ಸಂಬಳದ ಮೇಲೆ ಹೊಡೆತ ಬೀಳಲಿದೆ.