ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಇಲ್ಲಿನ ರೈಲ್ವೆ ಹಳಿ ಮೇಲೆ ಗೃಹಿಣಿಯ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಇಲ್ಲಿನ ನಡವತ್ತಿ ಗ್ರಾಮದ ಭಾವನ ಎಂಬಾಕೆಯ ಶವ ರೈಲ್ವೆ ಹಳಿ ಮೇಲೆ ಪತ್ತೆಯಾಗಿದೆ. ಇದರ ಬೆನ್ನಲ್ಲೆ ಪತಿ ಹಾಗೂ ಕುಟುಂಬಸ್ಥರ ಮೇಲೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ಪತಿ ಹಾಗೂ ತವರು ಮನೆಯವರಿಂದಲೂ ದೂರು
ಶನಿವಾರ ಭಾವನಳ ಪತಿ ಗಜೇಂದ್ರ ಪತ್ನಿ ಕಾಣೆಯಾಗಿದ್ದಾಳೆ ಎಂದು ಹೊಸಕೋಟೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೇ ವೇಳೆ ಭಾವನ ತಾಯಿ ಮನೆಯವರು ಸಹ ಠಾಣೆಯಲ್ಲಿ ದೂರು ನೀಡಿದ್ದು, ಗಜೇಂದ್ರ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ದೂರು ನೀಡಿದ್ದ ಹಿನ್ನೆಲೆ ಪೊಲೀಸರು ತನಿಖೆ ಆರಂಭಿಸಿದ್ದರು. ಆದರೆ ಬೆಳಗ್ಗೆ ರೈಲ್ವೆ ಹಳಿ ಮೇಲೆ ಶವ ದೊರೆತ ವಿಷಯ ತಿಳಿದು ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಭಾವನ ಶವವಾಗಿ ಪತ್ತೆಯಾಗಿರುತ್ತಾರೆ. ಬೆಂಗಳೂರಿನ ಸಿ.ವಿ ರಾಮನ್ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಪ್ರಕರಣ ದಾಖಲಿಸಿರುವ ರೈಲ್ವೆ ಪೊಲೀಸರು ಹೊಸಕೋಟೆ ಠಾಣೆಗೆ ವರ್ಗಾಯಿಸಿದ್ದಾರೆ.
ಈ ನಡುವೆ ದೈಹಿಕವಾಗಿ ಹಲ್ಲೆ ನಡೆಸಿ ಆಕೆಯನ್ನು ಶುಕ್ರವಾರ ರಾತ್ರಿಯೇ ಕೊಲೆ ಮಾಡಿ ಶವವನ್ನು ರೈಲ್ವೆ ಹಳಿಯ ಮೇಲೆ ಎಸೆದಿದ್ದಾರೆ ಎಂದು ಭಾವನಾ ಸಹೋದರ ರಾಮ್ ಕುಮಾರ್ ಆರೋಪಿಸಿದ್ದಾರೆ. ಅಲ್ಲದೆ ನಾವು ದೂರು ನೀಡಲು ಬಂದಾಗ ಪೊಲೀಸರು ನಿರ್ಲಕ್ಷಿಸಿದ್ದು, ತಡವಾಗಿ ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿದರು.