ಬೆಂಗಳೂರು: ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಕಡೆ ಕ್ಷಣದಲ್ಲಿ ತಮ್ಮ ನಿರ್ಧಾರ ಮಾರ್ಪಾಡು ಮಾಡಿಕೊಂಡಿದ್ದು, ಕಾಂಗ್ರೆಸ್ಗೆ ಬಾಹ್ಯ ಬೆಂಬಲ ನೀಡಲು ಮಾತ್ರ ಮುಂದಾಗಿದ್ದಾರೆ.
ನಾಳೆ ಕಾಂಗ್ರೆಸ್ ಪಕ್ಷದ ಕಚೇರಿಗೆ ಆಗಮಿಸಿ ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗಿ ಪಕ್ಷದ ಸದಸ್ಯತ್ವ ಸ್ವೀಕರಿಸಲು ಈ ಹಿಂದೆ ತೀರ್ಮಾನಿಸಿದ್ದರು. ಆದರೆ ಕಡೆಯ ಕ್ಷಣಗಳಲ್ಲಿ ತಮ್ಮ ಪರಿಸ್ಥಿತಿ ಸಚಿವ ಆರ್. ಶಂಕರ್ ರೀತಿಯಲ್ಲಿ ಆಗಬಾರದು ಎಂಬ ನಿರ್ಧಾರಕ್ಕೆ ಬಂದಿದ್ದು, ಕಾಂಗ್ರೆಸ್ಗೆ ಕೇವಲ ಬಾಹ್ಯ ಬೆಂಬಲ ನೀಡಲು ನಿರ್ಧರಿಸಿದ್ದಾರೆ.
ಈ ಹಿಂದೆ ಸಚಿವರಾಗುವ ಅವಕಾಶ ಸಿಕ್ಕ ಕಾರಣ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಬೆಂಬಲ ಸೂಚಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಸದಸ್ಯತ್ವ ಸ್ವೀಕರಿಸಿದ್ದ ಆರ್. ಶಂಕರ್, ಮೈತ್ರಿ ಸರ್ಕಾರ ಪತನವಾಗುವ ಸೂಚನೆ ಸಿಗುತ್ತಿದ್ದಂತೆ ಏಕಾಏಕಿ ಕಾಂಗ್ರೆಸ್ಗೆ ಕೈಕೊಟ್ಟು ಬಿಜೆಪಿ ಕಡೆ ಮುಖ ಮಾಡಿದ್ದರು.
ಕಾಂಗ್ರೆಸ್ ಸದಸ್ಯತ್ವ ಸ್ವೀಕರಿಸಿದ ಕಾರಣ ಅದೇ ಪಕ್ಷದ ಶಾಸಕರು ಎಂದು ಪರಿಗಣಿಸಲ್ಪಟ್ಟು ಶಾಸಕ ಸ್ಥಾನದಿಂದಲೂ ಅನರ್ಹಗೊಂಡಿದ್ದರು. ನಂತರ ಬಿಜೆಪಿಯಿಂದ ವಿಧಾನಪರಿಷತ್ತಿಗೆ ನಾಮನಿರ್ದೇಶನಗೊಂಡು ಸಚಿವರಾಗಲು ನಾನಾ ಸರ್ಕಸ್ ಮಾಡಿದ್ದಾರೆ.
ಸಾಕಷ್ಟು ಕಾನೂನು ತೊಡಕು ಹಾಗೂ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗುವುದರಿಂದ ಮುಂದಿನ ದಿನಗಳಲ್ಲಿ ಅನಿರೀಕ್ಷಿತವಾಗಿ ಎದುರಾಗುವ ಅನುಕೂಲಗಳ ಲಾಭ ಕಳೆದುಕೊಳ್ಳಬಾರದೆಂಬ ನಿರ್ಧಾರಕ್ಕೆ ಶರತ್ ಬಚ್ಚೇಗೌಡ ಬಂದಿದ್ದು, ಇದೀಗ ಈ ನಿರ್ಧಾರ ಕೈಗೊಂಡಿದ್ದಾರೆ.
ನಾಳೆ ಕೆಪಿಸಿಸಿ ಕಚೇರಿಯಲ್ಲಿ ನಡೆಯಬೇಕಿದ್ದ ಸೇರ್ಪಡೆ ಸಮಾರಂಭ ಬದಲಾವಣೆಗೊಂಡು ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸದಲ್ಲಿ ನಡೆಯಲಿದೆ. ನಾಳೆ ಬೆಳಗ್ಗೆ 11 ಗಂಟೆಗೆ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಲಿರುವ ಶರತ್ ಬಚ್ಚೇಗೌಡ ಇಲ್ಲಿಯೇ ಕಾಂಗ್ರೆಸ್ ಶಾಸಕಾಂಗ ಪಕ್ಷಕ್ಕೆ ಬಾಹ್ಯ ಬೆಂಬಲ ನೀಡುವ ಕುರಿತು ಪತ್ರ ಸಲ್ಲಿಸಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಹಾಜರಿರಲಿದ್ದಾರೆ. ಕಳೆದ ಕೆಲ ತಿಂಗಳಿಂದ ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಮಾತಿಗೆ ನಾಳೆ ವಿರಾಮ ಬೀಳಲಿದೆ. ಜತೆಗೆ ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಲಭಿಸುವ ಅವಕಾಶ ಆಧರಿಸಿ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.