ದೊಡ್ಡಬಳ್ಳಾಪುರ: ಕೊರೊನಾ ಸೋಂಕು ಸಾಮಾಜಿಕವಾಗಿ ಹರಡಿದ್ದು, ಬೆಂಗಳೂರಿನಲ್ಲಂತೂ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಈ ರೋಗಕ್ಕೆ ಇನ್ನೂ ಔಷಧಿ ಸಿಕ್ಕಿಲ್ಲ. ಮುನ್ನೆಚ್ಚರಿಕಾ ಕ್ರಮಗಳನ್ನ ಅನುಸರಿಸುವ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ರೋಗ ನಿಯಂತ್ರಣ ಮಾಡಬೇಕಾಗಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ದೊಡ್ಡಬಳ್ಳಾಪುರ ನಗರದ ಹೃದಯ ಭಾಗದಲ್ಲಿ 4.98 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಹೈಟೆಕ್ ಬಸ್ ನಿಲ್ದಾಣವನ್ನ ಉಪ ಮುಖ್ಯಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಇಂದು ಉದ್ಘಾಟಿಸಿ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಶಾಸಕ ಟಿ. ವೆಂಕಟರಮಣಯ್ಯ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.
ಕೊರೊನಾ ಹಿನ್ನೆಲೆ ಜನ ಬಸ್ ಸಂಚಾರ ಮಾಡಲು ಹಿಂದೇಟು ಹಾಕುತ್ತಿರುವುದರಿಂದ ಸಾರಿಗೆ ಇಲಾಖೆ ನಷ್ಟ ಅನುಭವಿಸುತ್ತಿದೆ. 50-55 ಜನ ಪ್ರಯಾಣಿಸುತ್ತಿದ್ದ ಬಸ್ಗಳಲ್ಲಿ ಕೇವಲ 8ರಿಂದ 10 ಜನ ಹೋಗುತ್ತಿದ್ದು, ಕಳೆದ ನಾಲ್ಕು ತಿಂಗಳಿಂದ ಬಸ್ಗಳ ಡೀಸೆಲ್ ಖರ್ಚಿಗೂ ಹಣವಿಲ್ಲದಂತಾಗಿದೆ. ಪ್ರತಿ ತಿಂಗಳು ಸಿಬ್ಬಂದಿ ವೇತನಕ್ಕಾಗಿ 326 ಕೋಟಿ ರೂಪಾಯಿ ಹಣ ಬೇಕಿತ್ತು. ಆದರೆ ಕೊರೊನಾ ಬಂದ ಮೊದಲ ಎರಡು ತಿಂಗಳಲ್ಲಿ ಒಟ್ಟು 652 ಕೋಟಿ ರೂಪಾಯಿ ಹಣವನ್ನು ಸರ್ಕಾರದ ಅನುದಾನದಿಂದ ಇಲಾಖೆ ಸಿಬ್ಬಂದಿಗೆ ವೇತನ ನೀಡಲಾಗಿದೆ.
ಇವೆಲ್ಲವೂ ಸರಿಹೋಗಬೇಕಾದರೆ ಕೊರೊನಾ ಹರಡುವಿಕೆ ತಡೆಯುವುದು ಅವಶ್ಯಕವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಕೊರೊನಾ ವಾರಿಯರ್ಸ್ ಸೂಚನೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದರು.