ಬೆಂಗಳೂರು: ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ಗೆ ಪೋಲಿಸ್ ಬಿಗಿ ಭದ್ರತೆ ಒದಗಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ನಂದಿಬೆಟ್ಟ ರಸ್ತೆಯಲ್ಲಿರುವ ಗಾಲ್ಫ್ ಶೈರ್ ರೆಸಾರ್ಟ್ ನಲ್ಲಿ ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿದ್ದು, ರೆಸಾರ್ಟ್ ಸುತ್ತ ಮುತ್ತ ಭದ್ರತೆ ಹೆಚ್ಚಿಸಲಾಗಿದೆ. ಯಾವುದೇ ಖಾಸಗಿ ವಾಹನಗಳಿಗೆ ಗೇಟ್ ಒಳಗೆ ಹೋಗದಂತೆ ನಿರ್ಬಂಧ ಹೇರಲಾಗಿದ್ದು, ಅನುಮತಿಯಿಲ್ಲದೇ ಪ್ರವೇಶ ನಿಷೇಧಿಸಲಾಗಿದೆ.
ವಿಜಯಪುರ, ಚನ್ನರಾಯಪಟ್ಟಣ, ವಿಶ್ವನಾಥಪುರ, ದೊಡ್ಡಬೆಳವಂಗಲ ಮತ್ತು ರಾಜನಕುಂಟೆ ಠಾಣೆಗಳ ಪೋಲಿಸರು ಭದ್ರತೆಯ ಜವಾಬ್ದಾರಿ ಹೊತ್ತಿದ್ದು, ಐದು ಸಬ್ ಇನ್ ಸ್ಪೆಕ್ಟರ್ ಗಳು ಮತ್ತು ಒಂದು ಕೆಎಸ್ ಆರ್ ಪಿ ತುಕಡಿ ಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಜೆಡಿಎಸ್ ನ 13 ಶಾಸಕರು ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದು, ಸಿಎಂ ಗಾಗಿ ಕಾಯುತ್ತಿದ್ದಾರೆ. ಶಾಸಕರ ಉಸ್ತುವಾರಿ ವಹಿಸಿಕೊಂಡಿರುವ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಕೂಡ ರೆಸಾರ್ಟ್ ನಲ್ಲಿ ಶಾಸಕರ ಜೊತೆ ವಾಸ್ತವ್ಯ ಹೂಡಿದ್ದು, ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಡುತ್ತಿದ್ದಾರೆ.