ದೊಡ್ಡಬಳ್ಳಾಪುರ: ದುರುದ್ದೇಶಪೂರ್ವಕವಾಗಿ ಅಧಿಕಾರಿಗಳ ಅನುಮತಿ ಪಡೆಯದೇ ಸರ್ಕಾರಿ ಉರ್ದು ಶಾಲೆ ಕೆಡವಿದ ಗ್ರಾಮ ಪಂಚಾಯತ್ ಅಧ್ಯಕ್ಷನನ್ನು ವಜಾಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಚನ್ನಗಂಗಯ್ಯ ವಜಾಗೊಂಡಿರುವ ತಾಲೂಕಿನ ಹೊನ್ನಾವರ ಗ್ರಾಮ ಪಂಚಾಯತ್ ಅಧ್ಯಕ್ಷ.
ಪಂಚಾಯತ್ ವ್ಯಾಪ್ತಿಯ ಪುಟ್ಟಯ್ಯನ ಅಗ್ರಹಾರದ ಸರ್ಕಾರಿ ಉರ್ದು ಶಾಲೆಯನ್ನ ದುರುದ್ದೇಶಪೂರ್ವಕವಾಗಿ ಕೆಡವಿದ್ದಾರೆ. ಶಿಥಿಲಗೊಂಡಿದ್ದ ಶಾಲೆಯನ್ನು ಕೆಡುವವ ಮುನ್ನ ತಾಲೂಕಿನ ಕಾರ್ಯನಿರ್ವಹಣಾ ಅಧಿಕಾರಿ ಅನುಮತಿ ಪಡೆದಿರಲಿಲ್ಲ.
ಅಲ್ಲದೆ, ಶಾಲಾ ಕೊಠಡಿ ಕಿಟಕಿ, ಬಾಗಿಲು ಮತ್ತು ಪಿಠೋಪಕರಣಗಳನ್ನ ಶಾಲೆಯ ವಶಕ್ಕೆ ನೀಡಿರುವುದಿಲ್ಲ. ಈ ಬಗ್ಗೆ ಪಂಚಾಯತ್ ಅಧ್ಯಕ್ಷ ಚನ್ನಗಂಗಯ್ಯ ವಿರುದ್ಧ ದೂರು ನೀಡಲಾಗಿತ್ತು.
ವಿಚಾರಣೆ ನಡೆಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 48(4) 48(5)ರ ಅನ್ವಯ ಕರ್ತವ್ಯ ನಿರ್ವಹಣೆಯಲ್ಲಿ ನಿರಂತರ ಅಲಕ್ಷ್ಯತೆ ಮತ್ತು ದುರ್ನಡತೆ ತೋರಿದ ಹೊನ್ನಾವರ ಗ್ರಾಮ ಪಂಚಾಯತ್ ಅಧ್ಯಕ್ಷ ಚನ್ನಗಂಗಯ್ಯನನ್ನು ಅಧ್ಯಕ್ಷ ಮತ್ತು ಸದಸ್ಯ ಸ್ಥಾನದಿಂದ ತೆಗೆದು ಹಾಕಿ ಅದೇಶ ಹೊರಡಿಸಿರುವ ಬಗ್ಗೆ ಆದೇಶಿಸಲಾಗಿದೆ.