ನೆಲಮಂಗಲ: ತಾಲೂಕಿನ ಅರೇಬೊಮ್ಮನಹಳ್ಳಿ ಗ್ರಾಮ ಪಂಚಾಯ್ತಿಯ ಸದಸ್ಯರು ಒಟ್ಟಾಗಿ ಕುರುಕ್ಷೇತ್ರ ನಾಟಕದಲ್ಲಿ ಅಭಿನಯಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
ಹೌದು, ಶ್ರೀಕೃಷ್ಣನ ಪಾತ್ರಧಾರಿಯಾಗಿ ಅಭಿನಯಿಸಿದ ಅರೇಬೊಮ್ಮನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶೈಲೇಂದ್ರ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ಒತ್ತಡಕ್ಕೆ ಒಳಗಾಗಿರುವ ಯುವಕರನ್ನು ಪೌರಾಣಿಕತೆ ಕಡೆಗೆ ಮುಖಮಾಡಲು ನಮ್ಮ ಗ್ರಾಮ ಪಂಚಾಯ್ತಿಯ ಎಲ್ಲಾ ಸದಸ್ಯರು ಒಗ್ಗೂಡಿ ಪೌರಾಣಿಕ ನಾಟಕದ ಬಣ್ಣ ಹಚ್ಚಿ ವೇದಿಕೆಯಲ್ಲಿ ಅಭಿನಯಿಸಲು ಮುಂದಾಗಿರುವುದು ನಮಗೆಲ್ಲ ಸಂತೋಷದ ವಿಷಯ ಎಂದರು.
ಇನ್ನು ಬಲರಾಮನ ಪಾತ್ರಧಾರಿ ಸಿದ್ದಗಂಗಯ್ಯ ಮಾತನಾಡಿ, ಆಡಳಿತ ವ್ಯವಸ್ಥೆಯ ಮೂಲವಾದ ಗ್ರಾಮ ಪಂಚಾಯ್ತಿಯ ಆಡಳಿತದ ಜೊತೆಗೆ ಬಿಡುವಿನ ವೇಳೆಯಲ್ಲಿ ಎಲ್ಲಾ ಸದಸ್ಯರು ಎರಡು ತಿಂಗಳುಗಳಿಂದ ನಾಟಕ ಕಲಿತು ಅಭಿನಯಿಸುತ್ತಿರುವುದು ಸಂತಸದ ವಿಷಯ. ನಮ್ಮ ಎಲ್ಲಾ ಜನಪ್ರತಿನಿಧಿಗಳು ಕಲೆ ಹಾಗೂ ಶಿಕ್ಷಣಕ್ಕೆ ಒತ್ತು ಕೊಡಲು ಮುಂದಾಗಿದ್ದು, ನಮ್ಮ ಹಿರಿಯರು ಅಭಿನಯಿಸುತ್ತಿದ್ದಂತಹ ಪೌರಾಣಿಕ ನಾಟಕಗಳಿಗೆ ಇಂದಿನ ಯುವ ಪೀಳಿಗೆ ಹೆಚ್ಚು ಒತ್ತು ನೀಡಬೇಕು ಎಂದರು.