ದೇವನಹಳ್ಳಿ (ಬೆಂಗಳೂರು): ಕಾಲಿಗೆ ಮೆಡಿಕಲ್ ಬ್ಯಾಂಡೇಜ್ ಸುತ್ತಿ, ಅದರೊಳಗೆ ಮರೆಮಾಚಿ ಚಿನ್ನ ಕಳ್ಳ ಸಾಗಣಿಕೆ ಮಾಡುತ್ತಿದ್ದ ಪ್ರಯಾಣಿಕನನ್ನು ದೇವನಹಳ್ಳಿಯಲ್ಲಿರುವ ಕಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಳು ಬಂಧಿಸಿದ್ದಾರೆ. ಆರೋಪಿಯಿಂದ 43 ಲಕ್ಷ ರೂ ಮೌಲ್ಯದ 700 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ.
ಮೇ 21 ರಂದು ಬ್ಯಾಂಕಾಕ್ನಿಂದ ಪ್ರಯಾಣಿಕ ಬಂದಿಳಿದಿದ್ದಾನೆ. ಪ್ರಯಾಣಿಕನ ಹಿನ್ನೆಲೆಯ ಕುರಿತು ಮಾಹಿತಿ ಕಲೆಹಾಕಿದ ಕಂದಾಯ ಗುಪ್ತಚಾರ ನಿರ್ದೇಶನಾಲಯ (DRI) ಮತ್ತು ಆದಾಯ ತೆರಿಗೆ ಏರ್ ಇಂಟೆಲಿಜೆನ್ಸ್ ಯೂನಿಟ್ (AIU) ಅಧಿಕಾರಿಗಳಿಗೆ ಸಂಶಯ ಮೂಡಿದೆ. ಹೀಗಾಗಿ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಬಳಿಕ ವಿಚಾರಣೆಗಾಗಿ ಆರೋಪಿ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದರು.
ವಿಚಾರಣೆ ನಡೆಸಿದಾಗ ತನ್ನ ಕಾಲಿಗೆ ಮೆಡಿಕಲ್ ಟೇಪ್ ಸುತ್ತಿಗೊಂಡಿದ್ದು, ಅದರೊಳಗೆ ಮರೆಮಾಚಿ ಚಿನ್ನವನ್ನು ಅಡಗಿಸಿಟ್ಟಿದ್ದು ಗೊತ್ತಾಗಿದೆ. ಆರೋಪಿಯಿಂದ ಎರಡು ಚಿನ್ನದ ಬಿಸ್ಕಟ್ ಮತ್ತು ಚೈನ್ ವಶಕ್ಕೆ ಪಡೆಯಲಾಗಿದೆ. ಒಟ್ಟು 700 ಗ್ರಾಂ ತೂಕದ 43,65,291 ರೂಪಾಯಿ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಅಧಿಕಾರಿಗಳು ವಿಚಾರಣೆ ಮುಂದುವರೆಸಿದ್ದಾರೆ.
ಕೈ ಕಡಗಕ್ಕೆ ರೇಡಿಯಮ್ ಲೇಪಿಸಿ ಚಿನ್ನ ಕಳ್ಳಸಾಗಣೆ: ಮೇ 20 ರಂದು ಬ್ಯಾಂಕಾಕ್ ನಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕನ ಮೇಲೆ ಸಂಶಯ ಮೂಡಿದ ಹಿನ್ನೆಲೆಯಲ್ಲಿ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದ್ದು, ಕೈ ಕಡಗ ಪತ್ತೆಯಾಗಿತ್ತು. ಚಿನ್ನದ ಕಡಗಕ್ಕೆ ರೇಡಿಯಮ್ ಲೇಪಿಸಿ ಕಳ್ಳ ಸಾಗಣಿಕೆಗೆ ಯತ್ನಿಸಿದ್ದ. ಆರೋಪಿಯಿಂದ 499.87 ಗ್ರಾಂ ತೂಕದ 31,14,190 ರುಪಾಯಿ ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿತ್ತು.
ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ 67 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ವಶ: ಮೇ 14 ರಂದು ರಿಯಾದ್‌ನಿಂದ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕನೊಬ್ಬ ಬಂದಿಳಿದಿದ್ದ. ಆತನಿಂದ 67 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಕಸ್ಟಮ್ಸ್ ಅಧಿಕಾರಿಗಳ ಪ್ರಕಾರ, ಪ್ರಯಾಣಿಕ ರಿಯಾದ್‌ನಿಂದ ಬಹ್ರೇನ್ ಮೂಲಕ ಹೈದರಾಬಾದ್‌ಗೆ ತಲುಪಿದ್ದಾನೆ.
ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕ ಮಾಹಿತಿಯ ಆಧಾರದ ಮೇಲೆ, ಬೆಳಗ್ಗೆ 5:30ಕ್ಕೆ GF-274 (ಗಲ್ಫ್ ಏರ್‌ಲೈನ್ಸ್) ವಿಮಾನದಲ್ಲಿ ಬಂದ ಪುರುಷ ಪ್ರಯಾಣಿಕನನ್ನು ಹೈದರಾಬಾದ್ ಕಸ್ಟಮ್ಸ್ ಮತ್ತು RGIAನ ಕಸ್ಟಮ್ಸ್ ಏರ್ ಇಂಟೆಲಿಜೆನ್ಸ್ ತಂಡವು ತಡೆದು ಆತನ ಲಗೇಜು ತಪಾಸಣೆ ನಡೆಸಿದಾಗ ಅದರಲ್ಲಿದ್ದ ಎಮರ್ಜೆನ್ಸಿ ಲೈಟ್ನ ಬ್ಯಾಟರಿಯೊಳಗೆ 24 ಕ್ಯಾರೆಟ್ ಶುದ್ಧತೆಯ 14 ಚಿನ್ನದ ಗಟ್ಟಿಗಳನ್ನು ಬಚ್ಚಿಟ್ಟಿರುವುದು ಪತ್ತೆಯಾಗಿದೆ. ವಶಪಡಿಸಿಕೊಂಡ ಚಿನ್ನದ ಗಟ್ಟಿಗಳ ಒಟ್ಟು ತೂಕ 1287.6 ಗ್ರಾಂ ಇದ್ದು, ಇದರ ಮೌಲ್ಯ ಸುಮಾರು 67,96,133 ರೂ. ಆಗಿದೆ. ಈ ಸಂಬಂಧ ಪ್ರಯಾಣಿಕನನ್ನು ಬಂಧಿಸಿ, ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಮುಂಬೈ ಏರ್ಪೋರ್ಟ್‌ನಲ್ಲಿ 10 ಕೋಟಿ ಮೌಲ್ಯದ ಚಿನ್ನ ವಶ: ಒಬ್ಬ ಭಾರತೀಯ, 18 ಮಂದಿ ಸುಡಾನ್ ಮಹಿಳೆಯರ ಬಂಧನ