ಬೆಂಗಳೂರು: ಹಿರಿಯೂರು ಶಾಸಕಿ ಪೂರ್ಣಿಮ ಶ್ರೀನಿವಾಸ್ಗೆ ಸಚಿವ ಸ್ಥಾನ ನೀಡಬೇಕೆಂದು ಹೊಸಕೋಟೆ ತಾಲೂಕು ಯಾದವ ಯುವ ಸೇನಾ ಆಗ್ರಹಿಸಿದೆ.
ನಗರದ ಪ್ರವಾಸಿ ಮಂದಿರದಲ್ಲಿ ಯಾದವ ಯುವ ಸೇನಾ ಹೊಸಕೋಟೆ ತಾಲೂಕು ಅಧ್ಯಕ್ಷ ಮಂಜನಾಥ್ ಈ ಬಗ್ಗೆ ಮಾತನಾಡಿ, ಕಳೆದ 10 ವರ್ಷಗಳಿಂದ ಯಾದವ ಜನಾಂಗದ ಯಾರೊಬ್ಬ ಶಾಸಕರು ಸಚಿವರಾಗಿಲ್ಲ. ಹೀಗಾಗಿ ಈ ಬಾರಿಯ ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದರು.
ಎ.ಕೃಷ್ಣಪ್ಪನವರ ನಂತರ 10-12 ವರ್ಷಗಳಿಂದ ನಮ್ಮ ಜನಾಂಗದ ಯಾರೊಬ್ಬ ವ್ಯಕ್ತಿಗೂ ಯಾವುದೇ ರಾಜಕೀಯ ಪಕ್ಷ ಸಚಿವ ಸ್ಥಾನ ನೀಡಿಲ್ಲ. ಕೃಷ್ಣಪ್ಪನವರು ಸಚಿವರಾಗಿದ್ದಾಗ ರಾಜ್ಯದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು. ಅ ಬಳಿಕ ನಮ್ಮ ಜನಾಂಗದ ಯಾರಿಗೂ ಅವಕಾಶ ಸಿಕ್ಕಿಲ್ಲ ಎಂದರು.
ಈಗ ನಮ್ಮ ಜನಾಂಗದ ಪೂರ್ಣಿಮಾ ಅವರು ಹಿರಿಯೂರಿನಿಂದ ಶಾಸಕಿಯಾಗಿ ಆಯ್ಕೆಯಾಗಿದ್ದು, ಅವರು ಕೃಷ್ಣಪ್ಪನವರ ಮಗಳಾಗಿದ್ದಾಋಎ. ತಂದೆಯಂತೆ ರಾಜ್ಯದ ಪರವಾಗಿ ಕಳಕಳಿ ಉಳ್ಳವರಾಗಿದ್ದಾರೆ. ರಾಜ್ಯದಲ್ಲಿ ಯಾದವ ಜನಾಂಗದ 30 ಲಕ್ಷಕ್ಕೂ ಹೆಚ್ಚು ಜನರಿದ್ದು, ನಮ್ಮ ಪ್ರತಿನಿಧಿಯಾಗಿ ಯಾರೂ ಇಲ್ಲದಿರುವುದು ಬೇಸರದ ಸಂಗತಿ. ಪೂರ್ಣಿಮಾ ಶ್ರೀನಿವಾಸ್ ಅವರು ನಮ್ಮ ಜನಾಂಗದ ಮೊದಲ ಶಾಸಕಿಯಾಗಿದ್ದು, ಅವರು ಸಚಿವರಾದರೆ ಜನಾಂಗಕ್ಕೆ ಸಿಗಬೇಕಾದ ಸ್ಥಾನಮಾನ, ವಿದ್ಯಾಭ್ಯಾಸಕ್ಕೆ ಸಹಾಯವಾಗಲಿದೆ. ಆದ್ದರಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ವಿನಂತಿಸಿದರು.