ದೊಡ್ಡಬಳ್ಳಾಪುರ: ತಿನ್ನಲು ಆಹಾರ ಸಿಗದೆ ವ್ಯಾಪಾರಿಯೊಬ್ಬ ಮಾರಾಟ ಮಾಡಲೆಂದು ದೇವಸ್ಥಾನದ ಮುಂದೆ ಇಟ್ಟಿದ್ದ ಕುಂಕುಮವನ್ನು ಕೋತಿಗಳು ತಿಂದಿರುವ ಮನಕಲಕುವ ಘಟನೆ ನಡೆದಿದೆ.
ದಕ್ಷಿಣ ಭಾರತದ ನಾಗಾರಾಧನೆಯ ಪ್ರಮುಖ ಕ್ಷೇತ್ರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ. ವಾರಾಂತ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಭಕ್ತರು ಈ ಕ್ಷೇತ್ರಕ್ಕೆ ಭೇಟಿ ನೀಡ್ತಾರೆ. ಭಕ್ತರ ಕಾಣಿಕೆ ಹಣವೇ ತಿಂಗಳಿಗೆ 50 ಲಕ್ಷಕ್ಕೂ ಹೆಚ್ಚು ಸಂಗ್ರಹವಾಗುತ್ತೆ. ಜೊತೆಗೆ ಭಕ್ತರ ಆಗಮನದಿಂದ ನೂರಾರು ವ್ಯಾಪಾರಿಗಳು ಸಹ ಇಲ್ಲಿ ಜೀವನ ಕಂಡುಕೊಂಡಿದ್ದಾರೆ.
ಕ್ಷೇತ್ರದಲ್ಲಿ ವಾಸವಾಗಿರುವ ಕೋತಿಗಳಿಗೆ ಇಲ್ಲಿಗೆ ಬರುವ ಭಕ್ತರು ನೀಡುವ ಹಣ್ಣು ಹಂಪಲು ಪ್ರಸಾದವೇ ಆಹಾರ. ಆದರೆ, ಕೊರೊನಾ ಹಿನ್ನೆಲೆ ಎರಡೂವರೆ ತಿಂಗಳಿಂದ ದೇವಸ್ಥಾನದ ಬಾಗಿಲು ಹಾಕಲಾಗಿದ್ದು, ಭಕ್ತರು ದೇವರ ದರ್ಶನದಿಂದ ದೇವಸ್ಥಾನದಿಂದ ದೂರವೇ ಉಳಿಯಬೇಕಾಗಿದೆ. ಒಂದೆಡೆ ಭಕ್ತರಿಲ್ಲದೆ ಕ್ಷೇತ್ರ ಬಿಕೋ ಎನ್ನುತ್ತಿದ್ರೆ ಇನ್ನೂಂದೆಡೆ ಭಕ್ತರು ಕೊಡುವ ಹಣ್ಣು, ತಿಂಡಿಗಳನ್ನ ಆಶ್ರಯಿಸಿದ್ದ ಕೋತಿಗಳು ಉಪವಾಸ ಬೀಳುವಂತೆ ಮಾಡಿದೆ. ಹಸಿವಿನಿಂದ ಬಳಲುತ್ತಿರುವ ಕೋತಿಗಳು ಆಹಾರಕ್ಕಾಗಿ ಅಲೆಯುತ್ತಿವೆ. ಕಣ್ಣಿಗೆ ಕಂಡಿದ್ದನ್ನು ತಿನ್ನುತ್ತಿವೆ.
ಹೀಗಾಗಿ ವ್ಯಾಪಾರಿಯೊಬ್ಬ ಮಾರಾಟ ಮಾಡಲೆಂದು ದೇವಸ್ಥಾನದ ಮುಂದೆ ಇಟ್ಟಿದ್ದ ಕುಂಕುಮದ ಬಾಟಲ್ನಿಂದ ಕೋತಿಗಳು ಕುಂಕುಮ ತೆಗೆದು ತಿಂದಿವೆ. ಇದರಿಂದ ಅವುಗಳ ಮೂತಿ ಕೆಂಪಾಯಿತೇ ಹೊರತು ಹೊಟ್ಟೆ ತುಂಬಲಿಲ್ಲ. ನಿರಾಸೆಯಿಂದಲೇ ಅಲ್ಲಿಂದ ಕಾಲ್ಕಿತ್ತವು.