ಬೆಂಗಳೂರು: ಎಲ್ಲರಿಗಿಂತ ಒಂದು ಕೈ ಹೆಚ್ಚೇ ತ್ಯಾಗ ಮಾಡಿರುವಾಗ ನನ್ನನ್ನು ಯಾಕೆ ಕಡೆಗಣಿಸುತ್ತಿದ್ದಾರೆಂದು ಗೊತ್ತಾಗುತ್ತಿಲ್ಲ ಎಂದು ಮಾಜಿ ಸಚಿವ ಆರ್. ಶಂಕರ್ ಹೇಳಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಎಲ್ಲರಿಗೂ ಸಚಿವ ಸ್ಥಾನ ಕೊಡುತ್ತಾರೆ, ನನಗೂ ಕೊಡುವ ವಿಶ್ವಾಸ ಇದೆ. ಈ ಕುರಿತು ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. 10 ಗಂಟೆವರೆಗೊ ಕಾಯುವಂತೆ ಹೇಳಿದ್ದಾರೆ ಎಂದರು.
ಇದನ್ನೂ ಓದಿ: ಕೆ.ಎಸ್ ಈಶ್ವರಪ್ಪನವರಿಗೆ ಸಚಿವ ಸ್ಥಾನ ಪಕ್ಕಾ: ಮಗ ಕಾಂತೇಶ್ ಆಡಿಯೋ ವೈರಲ್
ಎಲ್ಲರಿಗೂ ಕೊಟ್ಟು ನಮ್ಮಿಬ್ಬರಿಗೆ ಕೊಡದಿದ್ದರೆ, ಅವರೆಷ್ಟು ಸರಿ ಅಂತ ಅವರೇ ಪ್ರಶ್ನೆ ಮಾಡಿಕೊಳ್ಳಬೇಕು. ನಾವೆಲ್ಲ ಒಟ್ಟಾಗಿ ಸರ್ಕಾರ ರಚನೆಗೆ ಸಹಾಯ ಮಾಡಿದ್ದೇವೆ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಎಲ್ಲರಿಗಿಂತ ಒಂದು ಕೈ ಹೆಚ್ಚು ತ್ಯಾಗ ಮಾಡಿರುವಾಗ, ನನ್ನನ್ನು ಯಾಕೆ ಕಡೆಗಣಿಸುತ್ತಿದ್ದಾರೆಂದು ನನಗೂ ಗೊತ್ತಾಗುತ್ತಿಲ್ಲ ಎಂದು ಬೇಸರ ತೋಡಿಕೊಂಡರು.
ಈಗಲೂ ಕಾಲ ಮಿಂಚಿಲ್ಲ, ಸಚಿವ ಸ್ಥಾನ ಕೊಡುವ ನಿರೀಕ್ಷೆ ಇದೆ ಎಂದು ಹೇಳಿದರು. ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲು ನಿನ್ನೆ ಅವರು ದೆಹಲಿಗೆ ತೆರಳಿದ್ದರು.