ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆ ರೈತರಿಗೆ ಮಾರಕ. ಕಾಯ್ದೆಯ ಜೊತೆಗೆ ತಾಲೂಕು ಮತ್ತು ಹೋಬಳಿಗಳಲ್ಲಿ ಗೋಶಾಲೆ ತೆರೆದು ರೈತರಿಂದ ಸರ್ಕಾರವೇ ಜಾನುವಾರು ಖರೀದಿ ಮಾಡಿಲಿ. ಅದಕ್ಕೆ ನಮ್ಮ ಬೆಂಬಲವೂ ಇದೆ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ಸರ್ಕಾರದ ವಿರುದ್ಧ ಚಾಟಿ ಬೀಸಿದರು.
ಇದನ್ನೂ ಓದಿ...ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ ನೀಡಿದ ಬಮೂಲ್.. ಲೀಟರ್ಗೆ 2 ರೂಪಾಯಿ ಏರಿಕೆ..
ತಾಲೂಕಿನ ಮೆಣಸಿ ಕಾಲೋನಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ವಯಸ್ಸಾದ ಹಸುಗಳನ್ನು ಮಾರಾಟ ಮಾಡಬಾರದು ಎಂಬ ಕಾನೂನು ತಂದಿದೆ. ಮನೆಯಲ್ಲಿ ಜನಿಸಿದ ಗಂಡು ಕರು, ಕೋಣದ ಮರಿಗಳನ್ನು ಹಾಗೂ ಹಾಲು ನೀಡದಿರುವ ಹಸುಗಳನ್ನು ಮಾರಾಟ ಮಾಡಬಾರದು ಎಂಬ ಆದೇಶ ಹೊರಡಿಸಿದೆ. ಇದು ರೈತರಿಗೆ ಸಾಕಷ್ಟು ಹೊರೆಯಾಗಲಿದೆ ಎಂದರು.
ಹಳ್ಳಿಗಳಲ್ಲಿ ಹಸು ಕಟ್ಟಲು ಜಾಗದ ಸಮಸ್ಯೆ, ನಿರ್ವಹಣೆ ವೆಚ್ಚ ಹೆಚ್ಚು. ಮೇವಿನ ಸಮಸ್ಯೆ ಎದುರಾಗಬಹುದು. ಅವರು ಹಾಲಿನಲ್ಲಿ ದುಡಿದ ಹಣಕ್ಕಿಂತ ಹೆಚ್ಚು ಹಣ ವ್ಯಯ ಮಾಡಬೇಕಾಗುತ್ತದೆ. ಹೀಗಾಗಿ ಸರ್ಕಾರವೇ ತಾಲೂಕು ಮತ್ತು ಹೋಬಳಿಗಳಲ್ಲಿ ಗೋಶಾಲೆ ತೆರೆದು ರೈತರಿಂದ ಜಾನುವಾರುಗಳನ್ನು ಖರೀದಿಸಲಿ ಎಂದರು.