ದೊಡ್ಡಬಳ್ಳಾಪುರ : ಲಾಕ್ಡೌನ್ ಜಾರಿಯಿಂದ ಮದುವೆ, ಶುಭ ಸಮಾರಂಭಗಳು ನಡೆಯುತ್ತಿಲ್ಲ. ಜೊತೆಗೆ ದೇವಸ್ಥಾನಗಳ ಬಾಗಿಲು ಬಂದ್ ಆಗಿದೆ. ಹೊರ ದೇಶಗಳಿಗೆ ರಫ್ತು ಮಾಡಲು ವಿಮಾನಯಾನವೂ ಇಲ್ಲ. ಇದೆಲ್ಲದರ ನೇರ ಪರಿಣಾಮ ಹೂ ಬೆಳೆಗಾರರ ಮೇಲಾಗಿದೆ. ರಾಷ್ಟ್ರಿಕೃತ ಬ್ಯಾಂಕ್ನಲ್ಲಿ ಲಕ್ಷಗಟ್ಟಲೆ ಸಾಲ ಮಾಡಿ ಪಾಲಿಹೌಸ್ಗಳಲ್ಲಿ ಅಲಂಕಾರಿಕ ಪುಷ್ಪ ಬೆಳೆದು ವಿದೇಶಗಳಿಗೆ ರಫ್ತು ಮಾಡುವ ಮೂಲಕ ಹಣ ಸಂಪಾದನೆ ರೈತರು ಸಂಪಾದನೆ ಮಾಡುತ್ತಿದ್ದರು. ಆದರೆ, ಲಾಕ್ಡೌನ್ನಿಂದ ಅವರ ಜೀವನ ಸಂಕಷ್ಟಕ್ಕೀಡಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೆಹಳ್ಳಿ ಬಳಿಯ ಬೈಪಾಸ್ ರಸ್ತೆಯನ್ನು ತಾಲೂಕಿನ ಪಾಲಿಹೌಸ್ ಹೂ ಬೆಳೆಗಾರರ ಸಂಘದ ಸದಸ್ಯರು ಹೂಗಳಿಂದ ಅಲಂಕರಿಸಿದರು. ಕೊರೊನಾ ವೈರಸ್ ಹೂ ಬೆಳೆಯುವ ರೈತರನ್ನ ಉಳಿಸು ಎಂಬ ಸ್ಲೋಗನ್ ಬರೆದು ಗಮನ ಸೆಳೆದರು. ಅಲ್ಲದೇ ಟ್ರ್ಯಾಕ್ಟರ್ನಿಂದ ತುಂಬಿದ ಅಲಂಕಾರಿಕ ಹೂವುಗಳನ್ನ ರಸ್ತೆಗೆ ಸುರಿದು ತಮ್ಮ ಅಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ 300ಕ್ಕೂ ಹೆಚ್ಟು ಪಾಲಿಹೌಸ್ನಲ್ಲಿ ಹೂ ಬೆಳೆಯುವ ರೈತರಿದ್ದು, 2,500ಕ್ಕೂ ಹೆಚ್ಚು ಎಕರೆಯಲ್ಲಿ ಅಲಂಕಾರಿಕ ಹೂ ಬೆಳೆಯುತ್ತಿದ್ದಾರೆ. ಲಾಕ್ ಡೌನ್ನಿಂದ ಫ್ಲೋರಿ ಕಲ್ಚರ್ ಉದ್ಯಮ ನೆಲಕಚ್ಚಿದ್ದು, ಸರ್ಕಾರ ರೈತರ ಸಂಕಷ್ಟಕ್ಕೆ ನೇರವಾಗಬೇಕಿದೆ.
ಹೂ ಬೆಳೆಗಾರರ ಬೇಡಿಕೆಗಳೇನು?:
ಹೂ ಬೆಳೆಯುವ ರೈತರಿಗೆ ಹೆಕ್ಟೇರ್‌ಗೆ 25 ಸಾವಿರ ರೂ ಸಹಾಯಧನ ಘೋಷಣೆ ಮಾಡಿದೆ. ಆದರೆ ಈ ಹಣ ಯಾವುದಕ್ಕೂ ಸಾಲುವುದಿಲ್ಲ, ಒಂದು ಎಕರೆಗೆ ಒಂದು ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಸರ್ಕಾರ ಆರು ತಿಂಗಳ ನಿರ್ವಹಣಾ ವೆಚ್ಚ ಕೊಡಬೇಕು, ಕಮರ್ಷಿಯಲ್ ದರದಲ್ಲಿ ಹೂವು ಬೆಳೆಗಾರರಿಗೆ ವಿದ್ಯುತ್ ದರ ನಿಗದಿ ಮಾಡಿದ್ದಾರೆ. ಉಚಿತ ವಿದ್ಯುತ್ ನೀಡಬೇಕು, ರಸಗೊಬ್ಬರ ಮತ್ತು ಔಷಧಿಗಳನ್ನ ಜಿಎಸ್‌ಟಿ ತೆರಿಗೆಯಿಂದ ಹೊರಗಿಡಬೇಕು, ರಾಷ್ಟ್ರಿಕೃತ ಬ್ಯಾಂಕ್‌ಗಳಲ್ಲಿ ಆರು ತಿಂಗಳವರೆಗೂ ಬಡ್ಡಿ ಮನ್ನಾ ಮಾಡಬೇಕೆನ್ನುವ ಬೇಡಿಕೆಯನ್ನು ಸರ್ಕಾರಕ್ಕೆ ಇಟ್ಟರು.