ಆನೇಕಲ್ : ಪಟ್ಟಣದಲ್ಲಿ ಇಂದು ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.
ಪಟ್ಟಣದ ಬಾಬಯ್ಯನ ಗುಡಿ ಬಳಿಯ ನಿವಾಸಿ ಸುಮಾರು 35 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ನಿನ್ನೆ ಇದ್ದಕ್ಕಿದ್ದಂತೆ ಮಹಿಳೆಗೆ ವಾಂತಿ, ಭೇದಿ ಕಾಣಿಸಿಕೊಂಡ ಹಿನ್ನೆಲೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹೆಬ್ಬಾಳದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು, ಈ ವೇಳೆ, ಸೋಂಕು ತಗುಲಿರುವುದು ದೃಢಪಟ್ಟಿದೆ.
ವಿಷಯ ತಿಳಿಯುತ್ತಿದ್ದಂತೆ ಮಹಿಳೆ ವಾಸ ಮಾಡುತ್ತಿದ್ದ ಪ್ರದೇಶಕ್ಕೆ ದೌಡಾಯಿಸಿದ ಆರೋಗ್ಯ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳು ಮಹಿಳೆಯ ನಿವಾಸದ ಸುತ್ತಮುತ್ತಲ ಪ್ರದೇಶವನ್ನು ಸೀಲ್ಡೌನ್ ಮಾಡಿ ಕಂಟೇನ್ಮೆಂಟ್ ಝೋನ್ ಆಗಿ ಗುರುತಿಸಿದ್ದಾರೆ. ಜೊತೆಗೆ ಸಂಪೂರ್ಣ ಏರಿಯಾವನ್ನು ಸ್ಯಾನಿಟೈಸ್ ಮಾಡಲಾಗಿದೆ. ಇನ್ನು, ಮಹಿಳೆ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಗಂಡ , ಮಗ ಮತ್ತು ಸ್ಥಳೀಯ ಆಟೋ ಚಾಲಕ ಸೇರಿದಂತೆ ಒಟ್ಟು 18 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
ಸುತ್ತ ಮುತ್ತಲಿನ ನಿವಾಸಿಗಳಿಗೆ ಅನಾವಶ್ಯಕವಾಗಿ ಹೊರಬರದಂತೆ ಸೂಚಿಸಲಾಗಿದೆ. ಸೋಂಕಿತ ಮಹಿಳೆಯ ಟ್ರಾವೆಲ್ ಹಿಸ್ಟರಿ ಪ್ರಕಾರ ಆಕೆ ಬೆಂಗಳೂರಿನ ಲಕ್ಕಸಂದ್ರದಲ್ಲಿರುವ ತನ್ನ ತಾಯಿಯ ಮನೆಗೆ ಹೋಗಿ ಅಲ್ಲಿನ ನೆರೆಹೊರೆಯ ಮನೆಗಳಿಗೂ ಭೇಟಿ ನೀಡಿದ್ದಾರೆ. ಜೊತೆಗೆ ಸೋಂಕಿತ ಮಹಿಳೆಯ ಮನೆಗೆ ಆಕೆಯ ತಾಯಿ ಹಾಗೂ ಸಂಬಂಧಿಕರು ಬಂದು ಹೋಗಿದ್ದಾರೆ. ಹೀಗಾಗಿ, ಲಕ್ಕಸಂದ್ರ ಹಾಗೂ ಆನೇಕಲ್ನಲ್ಲಿ ಮಹಿಳೆಯೊಂದಿಗೆ ಸಂಪರ್ಕ ಹೊಂದಿದ್ದವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.