ಬೆಂಗಳೂರು: ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ಕೋಲಾರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಹಚ್ಚಿದ್ದು, ನೂರಾರು ಎಕರೆ ಅರಣ್ಯ ನಾಶವಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅರಣ್ಯಾಧಿಕಾರಿಗಳು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ರಾತ್ರಿ ವೇಳೆಯಾಗಿದ್ದರಿಂದ ಜೋರಾಗಿ ಬೀಸುತ್ತಿದ್ದ ಗಾಳಿಯು ಬೆಂಕಿಯ ಕೆನ್ನಾಲಿಗೆಯನ್ನು ಮತ್ತಷ್ಟು ಬಲಗೊಳಿಸುತ್ತ ಸಾಗಿದ್ದು ಅಗ್ನಿಶಾಮಕ ದಳವನ್ನು ಹೈರಾಣು ಮಾಡಿದೆ.
ಈ ಅರಣ್ಯ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಡವೆ, ಜಿಂಕೆ, ಮಂಗ, ಪುನುಗು ಬೆಕ್ಕು, ಕಾಡುಪಾಪ, ಅಳಿಲು, ನವಿಲು ಮುಂತಾದ ಅಳಿವಿನಂಚಿನಲ್ಲಿರುವ ಪ್ರಾಣಿಗಳು ಕಂಡು ಬರುತ್ತಿದ್ದವು. ಕಾಡ್ಗಿಚ್ಚಿಗೆ ಹಲವು ವನ್ಯ ಜೀವಿಗಳು ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ. ನಾನಾ ವಿಧದ ಸಸ್ಯಗಳು, ಮರಗಳು, ಅಪಾರ ಪ್ರಮಾಣದ ವನ್ಯ ಸಂಪತ್ತನ್ನ ಅಗ್ನಿ ಆಹುತಿ ಪಡೆದಿದೆ.