ದೊಡ್ಡಬಳ್ಳಾಪುರ (ಬೆಂ.ಗ್ರಾ): ಕಳಪೆ ಬಿತ್ತನೆ ಬೀಜ ಮಾರಾಟದಿಂದ ಮುಸುಕಿನ ಜೋಳ ಮೊಳಕೆಯೊಡೆಯದೇ ಬೆಳೆ ನಷ್ಟವಾಗಿದೆ. ಕಳಪೆ ಬಿತ್ತನೆ ಬೀಜವನ್ನು ಉತ್ಪಾದಿಸಿದ ಕಂಪನಿ ಮತ್ತು ಮಾರಾಟಗಾರರ ಮೇಲೆ ಕಾನೂನು ಕ್ರಮಕೈಗೊಂಡು ಪರಿಹಾರ ದೊರಕಿಸುವಂತೆ ರೈತನೊಬ್ಬ ಕೃಷಿ ಇಲಾಖೆಗೆ ದೂರು ನೀಡಿದ್ದು, ನ್ಯಾಯಾಲಯದ ಮೆಟ್ಟಿಲೇರಲು ಸಿದ್ದತೆ ನಡೆಸಿದ್ದಾರೆ.
ರೈತ ಗಂಗರಾಜ್ ಶಿರವಾರ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿನ ನಂಜುಂಡೇಶ್ವರ ಟ್ರೇಡರ್ಸ್ನಿಂದ ಮತ್ತು ಸಾಸಲು ರೈತ ಸಂಪರ್ಕ ಕೇಂದ್ರದಿಂದ ಸಿಪಿ 818 ಎಂಬ ಕಂಪನಿಯ ಮುಸುಕಿನ ಜೋಳದ ಬಿತ್ತನೆ ಬೀಜವನ್ನು ಖರೀದಿಸಿದ್ದರು. ಖರೀದಿಸಿದ ಬಿತ್ತನೆ ಬೀಜವನ್ನು ಬೈರಾಪುರದ ತಮ್ಮ ಜಮೀನಿನಲ್ಲಿ ಬಿತ್ತನೆ ಮಾಡಿದ್ದಾರೆ. ಆದರೆ, ಬಿತ್ತನೆ ಮಾಡಿದ ಬೀಜಗಳು ಸಮರ್ಪಕವಾಗಿ ಮೊಳಕೆಯೊಡೆದು ಬೆಳೆದಿಲ್ಲ ಎಂಬುದು ರೈತನ ಆರೋಪವಾಗಿದೆ.
ಉತ್ತಮ ರೀತಿಯಲ್ಲಿ ಜೋಳದ ಬೆಳೆ ಹುಟ್ಟದೇ ನಷ್ಟಕ್ಕೆ ತುತ್ತಾದ ರೈತ ದೊಡ್ಡಬಳ್ಳಾಪುರದ ಕೃಷಿ ಇಲಾಖೆಗೆ ದೂರು ನೀಡಿದ್ದು, ಕಂಪನಿ ಹಾಗೂ ಮಾರಾಟಗಾರನ ಮೇಲೆ ಕ್ರಮಕೈಗೊಂಡು ಬಿತ್ತನೆ ಬೀಜ, ಗೊಬ್ಬರ, ಉಳಿಮೆ, ಕೂಲಿ ಸೇರಿದಂತೆ ಸುಮಾರು 45 ಸಾವಿರ ರೂ. ನಷ್ಟ ಭರಿಸಬೇಕು ಎಂದ ಒತ್ತಾಯಿಸಿದ್ದಾರೆ.