ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಹಾಗೂ ದೊಡ್ಡಬಳ್ಳಾಪುರ ತಾಲೂಕು ಪಂಚಾಯಿತಿಯಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪೌಷ್ಟಿಕ ಕೈತೋಟ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ದೊಡ್ಡಬಳ್ಳಾಪುರ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮುರುಡಯ್ಯ, ಕೋಡಿಗೆಹಳ್ಳಿ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಪೌಷ್ಟಿಕ ಕೈತೋಟ ನಿರ್ಮಾಣಕ್ಕೆ ಉಚಿತ ಸಸಿಗಳನ್ನು ವಿತರಿಸಿದರು. ಬಳಿಕ ಮಾತನಾಡಿದ ಅವರು, ನರೇಗಾ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಕುಟುಂಬಗಳಿಗೆ ಉಚಿತವಾಗಿ ತೆಂಗು, ಮಾವು, ನಿಂಬೆ, ಪಪ್ಪಾಯಿ ಸೇರಿದಂತೆ 15 ಸಸಿಗಳನ್ನು ವಿತರಣೆ ಮಾಡಲಾಗುತ್ತಿದೆ. ಮನೆಯ ಆವರಣದಲ್ಲಿ ಕೈತೋಟ ಮಾಡಿಕೊಂಡು ಎಲ್ಲರೂ ಪೌಷ್ಟಿಕವಾದ ಹಣ್ಣು ಮತ್ತು ತರಕಾರಿಗಳನ್ನು ತಿನ್ನಬಹುದು ಎಂದರು.
ಸಂಜೀವಿನಿ ಎನ್ಆರ್ಎಲ್ಎಂ ಯೋಜನಾಧಿಕಾರಿ ವಿನುತಾ ರಾಣಿ ಮಾತನಾಡಿ, ನರೇಗಾ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತರಕಾರಿ - ಹಣ್ಣಿನ ಸಸಿಗಳನ್ನು ನೀಡಲಾಗುತ್ತಿದೆ. ಪ್ರತಿಯೊಬ್ಬರು ಸಹ ಆರೋಗ್ಯವಂತರಾಗಿರಬೇಕು ಎಂದು ಸರ್ಕಾರ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಎಲ್ಲರೂ ಸಸಿಗಳನ್ನು ನೆಟ್ಟು, ಜೋಪಾನವಾಗಿ ಬೆಳೆಸಬೇಕು. ಇದನ್ನು ಪಂಚಾಯಿತಿ ಮಟ್ಟದ ಅಧಿಕಾರಿಗಳು ಗಮನಿಸುತ್ತಿರುತ್ತಾರೆ ಎಂದು ತಿಳಿಸಿದರು.