ದೊಡ್ಡಬಳ್ಳಾಪುರ: ತಾಲೂಕಿನ ಮದುರೆ ಸಮೀಪದ ಹೊನ್ನಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂಪಾಡಿಪುರ ಗ್ರಾಮದಲ್ಲಿ ಕಳೆದ ಹತ್ತು ದಿನಗಳಿಂದ ನೀರಿನ ಸಮಸ್ಯೆ ತಲೆದೋರಿದ್ದು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ. ಆದರೆ ಟ್ಯಾಂಕರ್ನಲ್ಲಿ ಐದಾರು ಬಿಂದಿಗೆಯ ನೀರು ಯಾವುದಕ್ಕೂ ಸಾಕಾಗುವುದಿಲ್ಲವೆಂದು ಗ್ರಾಮಸ್ಥರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಐದಾರು ಬಿಂದಿಗೆ ನೀರಿನಲ್ಲಿ ಹಸುಗಳ ಸಾಕಾಣಿಕೆ, ದಿನನಿತ್ಯದ ಬಳಕೆಗೆ ಹೇಗೆ ಸಾಧ್ಯವಾಗುತ್ತದೆ ಎಂದು ಗ್ರಾಮಸ್ಥರು ಕೇಳುತ್ತಿದ್ದಾರೆ. ಇದರ ನಡುವೆ ನೀರಿನ ಜಗಳಕ್ಕೆ ಜಾತಿ ಮತ್ತು ಓಟು ರಾಜಕೀಯ ಬೇರೆ ಬೆರೆತಿದೆ. ಗ್ರಾಮದ ಒಂದೊಂದು ಬೀದಿಯಲ್ಲಿ ನಿಲ್ಲುವ ಟ್ಯಾಂಕರ್ನಿಂದ ಗ್ರಾಮಸ್ಥರು ನೀರು ಹಿಡಿಯುತ್ತಾರೆ. ದಲಿತರ ಮನೆ ಮುಂದೆ ನಿಲ್ಲುವ ಟ್ಯಾಂಕರ್ ಬಳಿ ಹೋಗಿ ನೀರು ಹಿಡಿಯಲು ಮೇಲ್ವರ್ಗದವರ ತಕರಾರು ಇದೆ. ಅವರ ಮನೆಯ ಮುಂದೆಯೇ ಟ್ಯಾಂಕರ್ ನಿಲ್ಲಬೇಕೇ, ನಾವೇಕೆ ಅಲ್ಲಿಯೇ ಹೋಗಿ ನೀರು ಹಿಡಿಯಬೇಕು ಎಂದು ಮೇಲ್ವರ್ಗದವರು ತಕರಾರು ಎತ್ತಿದ್ದಾರೆ.
ಇದನ್ನೂ ಓದಿ: ಕೊರೊನಾ ಮುಕ್ತಿಗಾಗಿ ಸಿಲಿಕಾನ್ ಸಿಟಿಯಲ್ಲಿ 'ಕೊರೊನಾ ಶಿವ' ಮೂರ್ತಿ ಪ್ರತಿಷ್ಠಾಪನೆ
ಈ ಸಂಬಂಧ ಪ್ರತಿಕ್ರಿಯೆ ನೀಡಿದ ಗ್ರಾಮ ಪಂಚಾಯಿತಿ ಸದಸ್ಯ ಸಿದ್ದರಾಜು, ಪ್ರತಿಯೊಂದು ಮನೆ ಮನೆಯ ಮುಂದೆಯೂ ವಾಹನ ನಿಲ್ಲಿಸಿ ನೀರು ಬಿಡಬೇಕು ಎಂದು ಗ್ರಾಮದ ಮೇಲ್ವರ್ಗದವರು ಆಗ್ರಹಿಸುತ್ತಿದ್ದಾರೆ. ಆದರೆ ರಸ್ತೆ ಇಲ್ಲದ ಕಡೆ ವಾಹನ ಓಡಾಡಲು ಸಾಧ್ಯವಾಗುತ್ತಿಲ್ಲ. ಗ್ರಾಮದಲ್ಲಿ ನೀರಿನ ಸಮಸ್ಯೆಗಿಂತ ಜಾತಿ ಸಮಸ್ಯೆ ಹೆಚ್ಚಿದೆ. ನೀರು ಬಿಡಲು ಬೀದಿಗೆ ಬರುವುದರಿಂದ ಅಲ್ಲಿ ನೀರು ಹಿಡಿಯಲು ಕೆಲವರು ನಿರಾಕರಿಸುತ್ತಾರೆ. ನಾವು ಅಲ್ಲಿಯೇ ನೀರು ಹಿಡಿದುಕೊಳ್ಳಿ ಎಂದರೆ ಈ ರೀತಿ ಆರೋಪ ಮಾಡುತ್ತಾರೆಂದರು. ತಮಗೆ ಓಟ್ ಹಾಕಿಲ್ಲವೆಂಬ ಕಾರಣಕ್ಕೆ ಹೆಚ್ಚಿನ ನೀರು ಬೀಡುತ್ತಿಲ್ಲವೆಂಬುದು ಗ್ರಾಮಸ್ಥರ ಆರೋಪವಾಗಿದೆ. ಇದಕ್ಕೂ ಪ್ರತಿಕ್ರಿಯೆ ಸಿದ್ದರಾಜು, ನಾವು ಇದುವರೆಗೂ ಈ ರೀತಿ ಮಾಡಿಲ್ಲ. ಇದು ಸತ್ಯಕ್ಕೆ ದೂರದ ಮಾತು ಎಂದರು.